ಆನೇಕಲ್(ಬೆಂಗಳೂರು):ತಾಲೂಕಿನ ಜಿಗಣಿಯಲ್ಲಿ ಇತ್ತೀಚೆಗೆ ಅಸ್ಸಾಂ ಮೂಲದ ಶಂಕಿತ ಉಗ್ರನನ್ನು ಬಂಧಿಸಿದ ಬೆನ್ನಲ್ಲೇ, ಪಾಕಿಸ್ತಾನ ಪ್ರಜೆ ಸೇರಿದಂತೆ ನಾಲ್ವರು ವಿದೇಶಿಗರನ್ನು ಬಂಧನ ಮಾಡಲಾಗಿದೆ. ಇವರೆಲ್ಲರೂ ಜಿಗಣಿ ಬಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿದ್ದರು. ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಪಾಕ್ ಪ್ರಜೆಯ ಪತ್ನಿ ಬಾಂಗ್ಲಾದೇಶದವಳಾಗಿದ್ದು, ಇಬ್ಬರು ಮಕ್ಕಳ ಜೊತೆ ವಾಸವಿದ್ದರು. ಬಂಧಿತ ವ್ಯಕ್ತಿಯು ಮೂಲತಃ ಪಾಕಿಸ್ತಾನದ ಪ್ರಜೆಯಾಗಿದ್ದು, ಕೆಲ ಕಾರಣಗಳಿಂದ ಪಾಕ್ನಿಂದ ಬಾಂಗ್ಲಾದೇಶಕ್ಕೆ ತೆರಳಿದ್ದ. ಬಳಿಕ ಬಾಂಗ್ಲಾದೇಶದ ಢಾಕಾದಲ್ಲಿ ವಾಸವಿದ್ದ. ಅಲ್ಲಿಯೇ ಯುವತಿಯನ್ನು ವಿವಾಹವಾಗಿದ್ದ. ತದನಂತರ 2014ರಲ್ಲಿ ಪತ್ನಿ ಜೊತೆ ಅಕ್ರಮವಾಗಿ ದೆಹಲಿಗೆ ಬಂದಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:ಬೆಂಗಳೂರು: ಮದ್ಯ ಪಾರ್ಟಿ ವೇಳೆ ಕಾಲು ತುಳಿದ ವ್ಯಕ್ತಿಯ ಹತ್ಯೆ, ಆರೋಪಿ ಸೆರೆ - Bengaluru Murder Case
ಸ್ಥಳೀಯ ವ್ಯಕ್ತಿಯ ನೆರವಿನಿಂದ ಗುರುತಿನ ದಾಖಲೆಗಳು ಸೃಷ್ಟಿ ಮಾಡಿಸಿಕೊಂಡಿದ್ದ. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಪಾಸ್‌ಪೋರ್ಟ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಸಿಕೊಂಡಿದ್ದ. 2018ರಲ್ಲಿ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದಾನೆ. ದಂಪತಿ ಇಬ್ಬರು ಮಕ್ಕಳ ಜೊತೆಗೆ ಜಿಗಣಿಯಲ್ಲಿ ವಾಸವಿದ್ದರು. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.