ಮಂಗಳೂರು:ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರತೊಡಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಂಗಳೂರಿನಲ್ಲಿ ಅಬ್ಬರದ ರೋಡ್ ಶೋ ಮೂಲಕ ಮತಬೇಟೆ ನಡೆಸಿದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರತ್ತ ಪ್ರಧಾನಿ ಮೋದಿ ಕೈ ಬೀಸಿದರು.
ಮೈಸೂರು ಸಮಾವೇಶದ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ಪ್ರಧಾನಿ ಮೋದಿ, ನೇರವಾಗಿ ಇಲ್ಲಿನ ನಾರಾಯಣಗುರು ವೃತ್ತಕ್ಕೆ (ಲೇಡಿಹಿಲ್) ಆಗಮಿಸಿದರು. ನಾರಾಯಣ ಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಿದರು. ಈ ವೇಳೆ ತುಳುನಾಡ ಕೊಂಬು ಚೆಂಡೆ, 10 ಮಂದಿಯಿಂದ ಶಂಕನಾದ ಹಾಗೂ 12 ತಂತ್ರಿಗಳ ವೇದಘೋಷಗಳು ಮೊಳಗಿದವು.
ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ದೊಡ್ಡದಾದ ರುದ್ರಾಕ್ಷಿ ಮಾಲೆಯನ್ನು ಮೋದಿಗೆ ಹಾಕಿದರು. ಸಂಸದ ನಳಿನ್ ಕುಮಾರ್ ಕಟೀಲ್ ಪ್ರಧಾನಿಗೆ ಕೇಸರಿ ಶಾಲು ಹೊದೆಸಿದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ದೇವರ ಪ್ರಭಾವಳಿಯ ಪ್ರತಿಕೃತಿ ನೀಡಿದರು. ಜೊತೆಗೆ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮೋದಿಗೆ ಪೇಟಾ ತೊಡಿಸಿದರು.
ಬಳಿಕ ರೋಡ್ ಶೋ ಲಾಲ್ಭಾಗ್, ಬಲ್ಲಾಳ್ಭಾಗ್, ಪಿವಿಎಸ್ ಮೂಲಕ ಸಾಗಿ ನವಭಾರತ್ ಸರ್ಕಲ್ವರೆಗೆ ಬಂದು ಸಮಾಪ್ತಿಗೊಂಡಿತು. ಸಂಜೆ 5 ಗಂಟೆಯಿಂದಲೇ ಮೋದಿ ನೋಡಲು ಕಾಯ್ದಿದ್ದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಸಣ್ಣ ಮಕ್ಕಳಿಂದ ಹಿಡಿದು, ಹಿರಿಯರ ತನಕ ರೋಡ್ ಶೋನಲ್ಲಿ ಭಾಗಿಯಾಗಿದ್ದು, ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ಕಂಡು ಸಂಭ್ರಮಿಸಿದರು. ಈ ವೇಳೆ ಬಿಜೆಪಿ ಬಾವುಟಗಳು ರಾರಾಜಿಸಿದರೆ, ರಸ್ತೆ ಇಕ್ಕೆಲಗಳಲ್ಲಿನ ಕೇಸರಿ ರಂಗು ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಿತು.