ಕರ್ನಾಟಕ

karnataka

By PTI

Published : Mar 18, 2024, 4:25 PM IST

Updated : Mar 18, 2024, 7:18 PM IST

ETV Bharat / state

ಶಿವಮೊಗ್ಗ: ಸುಳ್ಳುಗಳೇ ಕಾಂಗ್ರೆಸ್​ ಪಕ್ಷದ ಬಂಡವಾಳ; ಪ್ರಧಾನಿ ಮೋದಿ ಟೀಕಾಪ್ರಹಾರ, ಈಶ್ವರಪ್ಪ ಗೈರು

ಶಿವಮೊಗ್ಗದಲ್ಲಿ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ನಡುವೆ ಅವರ ಕಾರ್ಯಕ್ರಮದಿಂದ ಮಾಜಿ ಡಿಸಿಎಂ ಈಶ್ವರಪ್ಪ ದೂರ ಉಳಿದಿರುವುದು ಕಂಡು ಬಂದಿತು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಶಿವಮೊಗ್ಗ:ಪ್ರತಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಸುಳ್ಳುಗಳನ್ನು ಹರಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತದೆ. ಕರ್ನಾಟಕದಲ್ಲೂ ಇದೀಗ ಅದನ್ನೇ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಿವಮೊಗ್ಗದ ಜನತೆಗೆ ಹಾಗೂ ಸಿಗಂದೂರು ಚೌಡೇಶ್ವರಿ ದೇವಿಗೆ ಭಕ್ತಿಪೂರ್ವಕ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ ಪ್ರಧಾನಿ, ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಒಬ್ಬ ಪಾಲಿಕೆಯ ಸದಸ್ಯನೂ ಇಲ್ಲದ ವೇಳೆ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಅಭಿನಂದನೆಗಳು. ನಾನು ಶಿವಮೊಗ್ಗಕ್ಕೆ ಆಗಮಿಸಿದ ಉದ್ದೇಶ ರಾಜ್ಯದ 28ಕ್ಕೆ 28 ಸ್ಥಾನ ಗೆಲ್ಲಿಸಲು. ಬಿಜೆಪಿ - ಎನ್​ಡಿಎಗೆ ಜೂನ್ 6 ರಂದು 400ಕ್ಕೂ ಹೆಚ್ಚು ಸ್ಥಾನ ಬರಬೇಕಿದೆ. ವಿಕಸಿತ ಭಾರತಕ್ಕಾಗಿ ಹಾಗೂ ಬಡತನ, ಭಯೋತ್ಪಾನೆ ನಿರ್ಮೂಲನೆ ಹಾಗೂ ಯುವಜನತೆಗೆ ಉದ್ಯೋಗ ನೀಡಲು ಈ ಗುರಿ ಮುಟ್ಟಲೇಬೇಕಿದೆ ಎಂದರು.

ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, ಅವರ ಬಳಿ ಅಭಿವೃದ್ಧಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸುಳ್ಳು ಹೇಳುವುದೇ ಅವರ ಕೆಲಸವಾಗಿದೆ. ತಮ್ಮ ಒಂದು ಸುಳ್ಳನ್ನು ಮುಚ್ಚಿಡಲು ಇನ್ನೂಂದು ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿಯೂ ಅದೇ ಕಾಯಕವನ್ನು ಶುರು ಮಾಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು ಪರಿಣಿತರಾಗಿದ್ದಾರೆ. ಬೇರೆ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುವುದು, ಲೂಟಿ ಮಾಡುವುದು, ಜೇಬು ತುಂಬಿಸಿಕೊಳ್ಳುವುದು, ಕಾಂಗ್ರೆಸ್​​​ ಪಕ್ಷದ ಕೆಲಸವಾಗಿದೆ. ಕರ್ನಾಟಕವನ್ನು ಈಗ ಎಟಿಎಂ ಮಾಡಿಕೊಂಡಿದೆ. ಇಲ್ಲಿ ಸಿಎಂ ಜೊತೆ ಸೂಪರ್ ಸಿಎಂ, ಶ್ಯಾಡೋ ಸಿಎಂ ಹೀಗೆ... ಅನೇಕ ಸಿಎಂಗಳಿದ್ದಾರೆ. ಈ ಬಗ್ಗೆ ಈಗಾಗಲೇ ರಾಜ್ಯದ ಜನ ಸಿಟ್ಟಾಗುತ್ತಿರುವುದನ್ನು ನಾನು ಗಮನಿಸಿರುವೆ. ಬಿಜೆಪಿ - ಎನ್​ಡಿಎ ಪರ ಕೆಲಸ ಮಾಡಿದರೆ ಒಳಿತಾಗಲಿದೆ ಎಂದು ಅವರು ಹೇಳಿದರು.

ಇಂಡಿಯಾ ಮೈತ್ರಿಕೂಟ ಹಾಗೂ ಅದರ ಪ್ರಣಾಳಿಕೆಯಲ್ಲಿ ಶಕ್ತಿ ವಿರುದ್ಧ ಹೋರಾಟ ನಡೆಸುವ ಸಂಕಲ್ಪ ಮಾಡಲಾಗಿದೆ. ಮುಂಬೈ‌ನಲ್ಲಿ ಇಂತಹ ಆಲೋಚನೆಯನ್ನು ಹೊರಹಾಕಿದೆ. ಶಿವಾಜಿ ಪಾರ್ಕ್​​ನಲ್ಲಿ ಹಿಂದೂ ಶಕ್ತಿ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಿದ್ದಾರೆ. ನಮ್ಮ ಪ್ರಕಾರ ಶಕ್ತಿ ಎಂದರೆ ದೇವರು ಮಾತ್ರವಲ್ಲ, ಪ್ರತಿಯೊಬ್ಬ ತಾಯಿ, ಪ್ರತಿಯೊಬ್ಬ ಸಹೋದರಿ, ಪ್ರತಿಯೊಬ್ಬ ಮಗಳೂ ಶಕ್ತಿ ಸ್ವರೂಪವಾಗಿದೆ. ಸ್ತ್ರೀಯರ ಆಶೀರ್ವಾದವೇ ನನ್ನ ಶಕ್ತಿ‌ಯಾಗಿದೆ. ನಾವು ಭಾರತ ಮಾತೆಯನ್ನು ಪೂಜಿಸುತ್ತೇವೆ. ಆದರೆ, ವಿರೋಧ ಪಕ್ಷಗಳ ನಾಯಕರು ಶಕ್ತಿಯನ್ನೇ ನಿರ್ನಾಮ ಮಾಡುವ ಮಾತುಗಳನ್ನಾಡುತ್ತಾರೆ. ಇವರ ವಿರುದ್ಧದ ಹೋರಾಟಕ್ಕೆ ನಾವು ಸಿದ್ಧನಿದ್ದೇನೆ. ಹಿಂದೂ ಶಕ್ತಿಯನ್ನು ಉಳಿಸುವ ಶಪಥ ಮಾಡಿರುವೆ. ಇದಕ್ಕೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

ಕರ್ನಾಟಕದ ನೆಲದಲ್ಲಿ ಕುವೆಂಪು ಅವರು ಮಹಿಳೆಯರನ್ನು ಶಕ್ತಿ ರೂಪದಲ್ಲಿ ಕಾಣುವ ಪ್ರಯತ್ನ ಮಾಡಿದರು. ಆದರೆ, ಇದೀಗ ಇಂಡಿಯಾ ಮೈತ್ರಿಕೂಟ ಇಂತಹ‌ ಕೆಲಸ‌ ಮಾಡುವ ಮೂಲಕ ಇದೇ ಭಾರತೀಯ ಮಹಿಳೆಯರ ಮೇಲೆ ಆಕ್ರಮಣ ನಡೆಸುತ್ತಿದ್ದಾರೆ. ಅಧಿಕಾರ ಆಸೆಗಾಗಿ ದೇಶ, ಜಾತಿ ಸಮುದಾಯವನ್ನು ವಿಭಾಗಿಸುತ್ತಿದೆ. ಕರ್ನಾಟಕದ ಕಾಂಗ್ರೆಸ್ ಸಂಸದರೊಬ್ಬರು ದೇಶವನ್ನು ವಿಭಜಿಸುವ ಮಾತನ್ನು ಹಾಡಿದ್ದಾರೆ. ಇಂತಹವರನ್ನು‌ ಪಾರ್ಟಿಯಿಂದ ಹೊರ ಹಾಕುಬೇಕಿತ್ತು.‌ ಆದರೆ, ಮಾಡಲಿಲ್ಲ. ಬರುವ ಚುನಾವಣೆ ವೇಳೆ ನಿಮ್ಮ ಮತಗಳ ಮೂಲಕ ಇಂಡಿಯಾ ಮೈತ್ರಿಕೂಟವನ್ನು ಛಿದ್ರ ಛಿದ್ರ ಮಾಡಬೇಕಿದೆ ಎಂದರು.

ಇದೇ ವೇಳೆ ತಮ್ಮ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟ ಅವರು, ಮುಂಬರುವ ವರ್ಷದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಬೇಕಿದೆ. ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಈ ಸಲ ನಮ್ಮ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಬೇಕಿದೆ. ಎಲ್ಲಾ ಬೂತ್​​ನಲ್ಲಿ ಕಮಲವನ್ನು ಅರಳಿಸಬೇಕಿದೆ ಎಂದರು.

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮಾತನಾಡಿ, ಪ್ರಧಾನಿ ಮೋದಿ ಮೊನ್ನೆ ತಾನೇ ಕಲಬುರಗಿಗೆ ಬಂದು ಹೋಗಿದ್ದರು.‌ ಇದೀಗ ಜಿಲ್ಲೆಗೆ ಆಗಮಿಸಿದ್ದಾರೆ. ಮೋದಿ ಸರ್ಕಾರ ಚುನಾವಣೆಗೆ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸರ್ಕಾರವಲ್ಲ. ರೈತರಿಂದ ಹಿಡಿದು ಎಲ್ಲರನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯುವ ಸರ್ಕಾರ. ಕಾಶ್ಮೀರ 370 ರದ್ದು, ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ನೀಡುವ ಕಿಸಾನ್ ಸನ್ಮಾನ್ ಯೋಜನೆ ಜಾರಿ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ.

ನಾನು ಸಹ ಸಿಎಂ ಇದ್ದಾಗ ನಮ್ಮ ಸರ್ಕಾರದಿಂದ ರಾಜ್ಯದ ಪ್ರತಿ ರೈತರಿಗೆ 4 ಸಾವಿರ ನೀಡುವ ಯೋಜನೆ ತಂದಿತ್ತು. ಆದರೆ, ಹಾಲಿ ಕಾಂಗ್ರೆಸ್ ಸರ್ಕಾರ ಅದನ್ನು ರದ್ದು ಮಾಡಿದೆ. ರಾಜ್ಯ ಜನರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಪ್ರಧಾನಿ ಮೋದಿ ಒಂದೇ ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ನಾನು ಸಹ ನನ್ನ ಅಧಿಕಾರದ ಅವಧಿಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡಿರುವೆ. ಇದನ್ನೇ ಜನರ ಮುಂದಿಟ್ಟು ಮತ ಕೇಳುವೆ. ಮಾಜಿ ಪ್ರಧಾನಿ ದೇವೆಗೌಡರು ಸಹ ಪೋನ್ ಮಾಡಿ ನಾನು ಶಿವಮೊಗ್ಗಕ್ಕೆ ಬರುವೆ, ಇಬ್ಬರು ಸೇರಿ 28 ಸ್ಥಾನ ಗೆಲ್ಲೋಣ ಎಂದಿದ್ದಾರೆ. 28ಕ್ಕೆ 28 ಸ್ಥಾನಗಳನ್ನು ಗೆದ್ದು ಲೋಕಸಭೆಗೆ ಕಳುಹಿಸುವ ಕೆಲಸ ಮಾಡುವೆ ಎಂದು ಅವರು ಹೇಳಿದರು.

ಇದನ್ನೂ ಓದಿ:'ಲೂಟಿ ಮಾಡಿದವರನ್ನು ಜೈಲಿಗೆ ಕಳುಹಿಸುವುದು ಮೋದಿ ಗ್ಯಾರಂಟಿ'

ಮೋದಿ ಸಭೆಯಿಂದ ದೂರ ಉಳಿದ ಮಾಜಿ ಡಿಸಿಎಂ: ನಿರೀಕ್ಷೆಯಂತೆ ಬಿಎಸ್​​ವೈ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ನಾಯಕ ಮಾಜಿ ಡಿಸಿಎಂ ಈಶ್ವರಪ್ಪ, ಪ್ರಧಾನಿ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಅವರು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಇಂದು ವಿವಿಧ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಬೆಂಬಲ ಹಾಗೂ ಆಶೀರ್ವಾದ ಕೋರುತ್ತಿದ್ದಾರೆ.

Last Updated : Mar 18, 2024, 7:18 PM IST

ABOUT THE AUTHOR

...view details