ನವದೆಹಲಿ/ಬೆಂಗಳೂರು:ಮಾಜಿ ಸಿಎಂ ಎಸ್ಎಂ ಕೃಷ್ಣ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಸಮಾಜದ ಎಲ್ಲಾ ವರ್ಗಗಳ ಮೆಚ್ಚುಗೆಗೆ ಪಾತ್ರರಾದ ನಾಯಕ ಅವರು ಎಂದು ಬಣ್ಣಿಸಿದ್ದಾರೆ.
ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ 92 ವರ್ಷದ ಎಸ್ಎಂ ಕೃಷ್ಣ ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅವರ ಸಾವಿಗೆ ದುಃಖ ವ್ಯಕ್ತಪಡಿಸಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಶ್ರೀ ಎಸ್ಎಂ ಕೃಷ್ಣ ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದಂತೆ ಶ್ರಮಿಸಿದರು. ಕರ್ನಾಟಕದಲ್ಲಿ ಸಿಎಂ ಆಗಿ ಆಡಳಿತ ನಡೆಸಿದ ವೇಳೆಯಲ್ಲಿ ಅವರು ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದ ನಾಯಕ. ಅವರೊಬ್ಬ ಅತ್ಯುತ್ತಮ ಓದುಗ ಮತ್ತು ಚಿಂತಕ ಎಂದಿದ್ದಾರೆ.
ಇದೇ ವೇಳೆ ಎಸ್ ಎಂ ಕೃಷ್ಣ ಜೊತೆಗೆ ಸಂವಹನ ನಡೆಸಲು ಅನೇಕ ಅವಕಾಶಗಳು ಸಿಕ್ಕಿದ್ದವು ಎಂದು ನೆನೆದಿರುವ ಅವರು, ಎಸ್ಎಂ ಕೃಷ್ಣ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅತೀವ ದುಃಖ ಉಂಟಾಯಿತು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರಪತಿಗಳಿಂದ ಸಂತಾಪ:ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಕೂಡ ಕೃಷ್ಣ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದು, ವಿಧಾನಸಭೆ ಮತ್ತು ಸಂಸತ್ ಸದಸ್ಯರಿಂದ ಕೇಂದ್ರ ಸಚಿವರು ಮತ್ತು ರಾಜ್ಯಪಾಲರವರೆಗೆ ಸುದೀರ್ಘ ಕಾಲ ಸಾರ್ವಜನಿಕ ಜೀವನದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಸೇವೆ ಸಲ್ಲಿಸಿದ್ದ ಎಸ್. ಎಂ. ಕೃಷ್ಣ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ಧಿಯಿಂದಾಗಿ ಜನರ ಪ್ರೀತಿಯನ್ನು ಗಳಿಸಿದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ ಎಂದಿದ್ದಾರೆ.
ವಯನಾಡು ಸಂಸದೆ ಪ್ರಿಯಾಂಕಾ ಗಾಂದಿ ವಾದ್ರಾ ಕೂಡ ಎಸ್ಎಂಕೆ ಸಾವಿಗೆ ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದಾರೆ. ಕರ್ನಾಟಕದ ಪ್ರಗತಿ ಮತ್ತು ಜಾಗತಿಕ ಭೂಪಟದಲ್ಲಿ ಬೆಂಗಳೂರಿಗೆ ಸ್ಥಾನ ನೀಡುವಲ್ಲಿ ಅವರ ಕೊಡುಗೆ ಅಪಾರ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕೂಡ ಎಸ್ ಎಂ ಕೃಷ್ಣ ಸಾವಿಗೆ ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದಾರೆ. ರಾಜ್ಯಗಳಿಗೆ ಹೂಡಿಕೆ ಆಕರ್ಷಿಸುವಲ್ಲಿ ನಾವು ಸ್ಪರ್ಧಾತ್ಮಕ ಸ್ನೇಹವನ್ನು ಹೊಂದಿದ್ದೆವು. ಜನರ ಕಲ್ಯಾಣಕ್ಕೆ ಆದ್ಯತೆ ನೀಡಿದ ನಾಯಕ ಅವರು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು ಎಂದಿದ್ದಾರೆ.
ಇದನ್ನೂ ಓದಿ:ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ವಿಧಿವಶ; ನಾಳೆ ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ