ಬೆಂಗಳೂರು: ತಮಿಳುನಾಡು ಸರ್ಕಾರ ಬೆಂಗಳೂರು ಸಮೀಪದ ಹೊಸೂರಿನಲ್ಲಿ ವಿಮಾನ ನಿಲ್ದಾಣದ ಘೋಷಣೆ ಮಾಡಿರಬಹುದು. ಆದರೆ ನಾವು ಯಾವುದೇ ಹಿತಾಸಕ್ತಿ ಇಲ್ಲದೆ, ಕೇವಲ ರಾಜ್ಯ ಹಾಗು ಬೆಂಗಳೂರು ಹಿತದ ದೃಷ್ಟಿಯನ್ವಯ ಕಾರ್ಯಸಾಧು ಆಧಾರದಲ್ಲಿಯೇ ಸ್ಥಳ ಗುರುತಿಸಿ ಎರಡನೇ ವಿಮಾನ ನಿಲ್ದಾಣವನ್ನು ಬೆಂಗಳೂರಿನಲ್ಲಿಯೇ ನಿರ್ಮಿಸುತ್ತೇವೆ. ತಜ್ಞರ ವರದಿ ಆಧಾರದಲ್ಲಿಯೇ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಜವರಾಯಿಗೌಡ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, 2033ರ ವೇಳೆಗೆ ಈಗಿರುವ ವಿಮಾನ ನಿಲ್ದಾಣದ ಮೇಲಿನ ಕಾರ್ಯಭಾರ ಹೆಚ್ಚಾಗಲಿದೆ. ಪ್ರಯಾಣಿಕರು ಮತ್ತು ಕಾರ್ಗೋ ಒತ್ತಡ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಹಾಗಾಗಿ ಮತ್ತೊಂದು ವಿಮಾನ ನಿಲ್ದಾಣಕ್ಕೆ ನಾವು ಮುಂದಾಗಿದ್ದೇವೆ. ನಮ್ಮ ನಿರ್ಧಾರದ ನಂತರವೇ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ನಾವು ಅವರ ರೀತಿ ಸ್ಥಳದ ಹೆಸರು ಪ್ರಕಟಿಸುತ್ತಿಲ್ಲ. ನಾವು ಈಗಾಗಲೇ ಚರ್ಚೆ ಮಾಡಿ ತಜ್ಞರ ಜೊತೆ ಎರಡು ಸಭೆ ನಡೆಸಿ ಅಭಿಪ್ರಾಯ ಪಡೆದು ಆನ್ ಮೆರಿಟ್ ಮೇಲೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲದೆ ಯಾವ ಸ್ಥಳ ಎಂದು ನಿರ್ಧಾರ ಮಾಡಲಿದ್ದೇವೆ ಎಂದರು.
2035 ರ ವೇಳೆಗೆ 100 ಮಿಲಿಯನ್ ಪ್ರಯಾಣಿಕರ ಸಂಖ್ಯೆ ಆಗಲಿದ್ದು, ಅವರೆಲ್ಲರಿಗೂ ಅನುಕೂಲವಾಗಬೇಕು ಎಂದು ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡಲಿದ್ದೇವೆ. ಸಂಚಾರ ದಟ್ಟಣೆ, ಅಗತ್ಯತೆ, ಫಿಸಿಬಿಲಿಟಿ, ರಾಜ್ಯದ ಹಿತಾಸಕ್ತಿ ನೋಡಿಯೇ ನಿರ್ಮಾಣ ಮಾಡಲಾಗುತ್ತದೆ. ಎಲ್ಲಿ ಎಂದು ಇನ್ನು ಅಂತಿಮವಾಗಿಲ್ಲ. ಕಾರ್ಯಸಾಧು ನೋಡಿಕೊಂಡೇ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರದ ನೆರವು ಬೇಕು: ರಾಜ್ಯದಲ್ಲಿ ಯಾವುದೇ ಸೆಮಿ ಕಂಡಕ್ಟರ್ ತಯಾರಿಕಾ ಘಟಕಗಳನ್ನು ಸ್ಥಾಪಿಸಿಲ್ಲ. ಸ್ಥಾಪನೆ ಕುರಿತ ಚರ್ಚೆಗಳು ಆರಂಭಿಕ ಹಂತದಲ್ಲಿದ್ದು, ಘಟಕಗಳು ಬರಲು ಕೇಂದ್ರದ ಸಹಕಾರ ಮುಖ್ಯ, ನಾವು ಅಗತ್ಯ ಸಹಕಾರಕ್ಕೆ ಸಿದ್ಧ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.