ದಾವಣಗೆರೆ: ಕೆಲ ತಿಂಗಳ ಹಿಂದೆ ಜಿಲ್ಲೆಯಲ್ಲಿ ಭೀಕರ ಬರಗಾಲವಿತ್ತು. ಹನಿ ನೀರಿಗಾಗಿ ರೈತರು ಪರಿತಪಿಸುವ ಪರಿಸ್ಥಿತಿ ಇತ್ತು. ಬೆಳೆ ಬೆಳೆಯಲಾಗದೆ ತೀವ್ರ ಸಂಕಷ್ಟಕ್ಕೀಡಾಗಿದ್ದರು. ಇದೀಗ ಜಿಲ್ಲೆಯಲ್ಲಿ ಮಳೆರಾಯ ಭರಪೂರ ಕೃಪೆ ತೋರಿದ್ದಾನೆ. ಸಾಲ ಮಾಡಿ ರೈತ ಬೆಳೆ ತೆಗೆದಿದ್ದಾನೆ. ಆದರೆ ಬೆಳೆಗಳ ಮೇಲೆ ಕಾಡು ಹಂದಿಗಳು ದಾಳಿ ಮಾಡುತ್ತಿವೆ. ಮೆಕ್ಕೆಜೋಳ, ಅಡಿಕೆ ತೋಟವನ್ನು ನಾಶಪಡಿಸುತ್ತಿದ್ದು, ರೈತನಿಗೆ ದಿಕ್ಕೇ ತೋಚದಂತಾಗಿದೆ.
ಚನ್ನಗಿರಿ ತಾಲೂಕಿನ ನಿಲೋಗಲ್ ಗ್ರಾಮದ ರೈತರು ಕರಡಿ, ಕಾಡು ಹಂದಿ ಉಪಟಳಕ್ಕೆ ಮೆಕ್ಕೆಜೋಳ, ಅಡಿಕೆ ತೋಟ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ರೈತ ಶಾಂತಕುಮಾರ್ ನಾಲ್ಕು ಎಕರೆ ಅಡಿಕೆ ತೋಟದ ಜೊತೆಗೆ, ಮಿಶ್ರ ಬೆಳೆಯಾಗಿ ಮೆಕ್ಕೆಜೋಳ ಬಿತ್ತಿದ್ದಾರೆ. ಕಾಡುಹಂದಿಗಳ ಉಪಟಳದಿಂದ ಬೆಳೆ ಉಳಿಸಿಕೊಳ್ಳುವುದು ಇವರಿಗೆ ಸವಾಲಾಗಿದೆ.
ಮೆಕ್ಕೆಜೋಳ ಬಿತ್ತಿದರೆ ಬೀಜವನ್ನು ಹೆಕ್ಕಿ ತೆಗೆದು ನಾಶಪಡಿಸುತ್ತಿವೆ. ಕಾಡು ಹಂದಿಗಳಿಗೆ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ರೈತರ ದೂರು.