ಕರ್ನಾಟಕ

karnataka

ETV Bharat / state

ಸರ್ಕಾರಿ ಕಟ್ಟಡಗಳ ಮೇಲೆ ರಾಜಕೀಯ ನಾಯಕರ ಫೋಟೋ: ವಿವರಣೆ ಕೇಳಿದ ಹೈಕೋರ್ಟ್ - HIGH COURT

ಸರ್ಕಾರಿ ಕಟ್ಟಡಗಳ ಮೇಲೆ, ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ನಾಯಕರ ಫೋಟೋ ಹಾಕಿರುವುದನ್ನು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಮಾಹಿತಿ ಕೇಳಿ ವಿಚಾರಣೆ ಮುಂದೂಡಿತು.

HIGH COURT
ಹೈಕೋರ್ಟ್ (ETV Bharat)

By ETV Bharat Karnataka Team

Published : Feb 10, 2025, 9:45 PM IST

ಬೆಂಗಳೂರು: ರಾಜಕೀಯ ನಾಯಕರ ಫೋಟೋಗಳನ್ನು ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದು ಕರ್ನಾಟಕ ಬಯಲು ಜಾಗಗಳನ್ನು ವಿರೂಪಗೊಳಿಸುವುದನ್ನು ತಡೆಯುವ ಕಾಯ್ದೆಯ ವ್ಯಾಪ್ತಿಗೆ ಬರಲಿದೆಯೇ ಎಂಬುದರ ಕುರಿತಂತೆ ವಿವರಣೆ ನೀಡುವಂತೆ ಬಿಬಿಎಂಪಿಗೆ ಇಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಬಿಬಿಎಂಪಿ ಹಾಗೂ ಇತರೆ ಸರ್ಕಾರಿ ಕಟ್ಟಡಗಳಲ್ಲಿ, ಉದ್ಯಾನವನಗಳಲ್ಲಿ ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಅವರ ಫೋಟೋಗಳನ್ನು ಬಿಬಿಎಂಪಿ ಹಣದಲ್ಲಿ ಹಾಕಿರುವುದನ್ನು ಆಕ್ಷೇಪಿಸಿ ಸ್ಥಳೀಯ ನಿವಾಸಿ ಎಚ್.ಎಂ.ಆರ್ತೀಶ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ.ಎಂ.ಐ.ಅರುಣ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರು, ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಇಲಾಖಾ ಸಚಿವರು ಚಿತ್ರಗಳನ್ನು ಹೊರತುಪಡಿಸಿ, ಸಂಸದರು, ಶಾಸಕರು ಸೇರಿದಂತೆ ಬೇರೆ ಯಾರದೂ ಚಿತ್ರಗಳನ್ನು ಸರ್ಕಾರದ ಕಟ್ಟಡಗಳಲ್ಲಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಆದಾಗ್ಯೂ, ಪ್ರಿಯಕೃಷ್ಣ ಮತ್ತು ಕೃಷ್ಣಪ್ಪ ಅವರ ಚಿತ್ರಗಳನ್ನು ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳಲ್ಲಿ ಹಾಕಲಾಗಿದೆ. ಅದೂ ಸಹ ಬಿಬಿಎಂಪಿಯ ಹಣದಲ್ಲಿ. ಅಲ್ಲದೇ ಅರ್ಜಿದಾರರಿಗೆ ಇಬ್ಬರು ಶಾಸಕರಿಂದ ನಿರಂತರ ಬೆದರಿಕೆ ಇದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಬಿಬಿಎಂಪಿ ಪರ ವಕೀಲರು, ಈ ವಿಚಾರದಲ್ಲಿ ಪಾಲಿಕೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಫೋಟೋ ಅಳವಡಿಸುವುದು ವಿರೂಪಗೊಳಿಸುವ ವ್ಯಾಪ್ತಿಗೆ ಬರುತ್ತದೆಯೇ ಎಂದು ನ್ಯಾಯಪೀಠ ಕೇಳಿತು. ಇದಕ್ಕೆ ಮತ್ತಷ್ಟು ಮಾಹಿತಿ ಸಂಗ್ರಹಿಸಬೇಕಾಗಿದೆ ಎಂದು ತಿಳಿಸಿದರು.

ಬಳಿಕ ರಾಜಕೀಯ ನಾಯಕರ ಫೋಟೋಗಳನ್ನು ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದರಿಂದ ಕರ್ನಾಟಕ ಬಯಲು ಜಾಗಗಳನ್ನು ವಿರೂಪಗೊಳಿಸುವುದನ್ನು ತಡೆ ಕಾಯ್ದೆಯ ಉಲ್ಲಂಘನೆ ಆಗಲಿದೆಯೇ ಎಂಬ ಅಂಶವನ್ನು ತಿಳಿದುಕೊಂಡು ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿತು.

ಇದನ್ನೂ ಓದಿ:ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ, ಸದಸ್ಯರ ನೇಮಕಕ್ಕೆ ಸಮಿತಿ ರಚಿಸಿದ ಸರ್ಕಾರ: ಅರ್ಜಿ ಇತ್ಯರ್ಥ - CDRC

ABOUT THE AUTHOR

...view details