ಬೆಂಗಳೂರು:''ಕಳಪೆ ಗುಣಮಟ್ಟದ ಔಷಧಿಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವುದರಿಂದ ಔಷಧಿ ತಯಾರಿಕಾ ಕಂಪನಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ಹಾಗಾಗಿ, ಕಳಪೆ ಔಷಧಿಗಳ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ'' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಔಷಧಿಗಳ ಗುಣಮಟ್ಟ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು:ಶೇಷಾದ್ರಿಪುರದಲ್ಲಿರುವ ಶಾಸಕರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕೇಂದ್ರ ಸರ್ಕಾರಕ್ಕೆ ನಾನು ಈಗಾಗಲೇ ಪತ್ರ ಬರೆದು ಔಷಧಿಗಳ ಗುಣಮಟ್ಟದ ಬಗ್ಗೆ ಗಮನ ಸೆಳೆದಿದ್ದು, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕಾದ ವಿಚಾರ, ರಾಜ್ಯದ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಕೆಲವು ಔಷಧಿಗಳಲ್ಲಿ ಕಳಪೆ ಗುಣಮಟ್ಟ ಕಂಡುಬಂದಿದೆ. ಅದನ್ನು ಬೇರೆ ರಾಜ್ಯಗಳಿಗೂ ತಿಳಿಸುವುದು ನಮ್ಮ ಪತ್ರದ ಉದ್ದೇಶವಾಗಿತ್ತು'' ಎಂದರು.
''ಕೆಲವು ಕಂಪನಿಗಳು ಗುಣಮಟ್ಟದ ಔಷಧಿಗಳನ್ನು ಪೂರೈಸುತ್ತವೆ. ಇನ್ನೂ ಕೆಲವು ಕಂಪನಿಗಳು ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಅಂತಹ ಔಷಧಿಗಳನ್ನು ಈಗಾಗಲೇ ನಿಷೇಧ ಮಾಡಲಾಗಿದೆ'' ಎಂದು ತಿಳಿಸಿದರು.
''ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕಾರಣವಾದ ಐವಿ ದ್ರಾವಣ ತಯಾರಿಸಿದ ಪಶ್ಚಿಮ್ ಬಂಗಾ ಕಂಪನಿ ಮುಚ್ಚಿದೆ. ಅವರು ಹಲವು ಬಗೆಯ ಔಷಧಿಗಳನ್ನು ತಯಾರಿಸುತ್ತಿದ್ದರು. ನಮ್ಮ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಈಗ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದು ಸ್ಪಷ್ಟವಾಗಿದೆ'' ಎಂದು ಹೇಳಿದರು.
ಕೋವಿಡ್ ಹಗರಣದಲ್ಲಿ ಏಕಾಏಕಿ ಕ್ರಮ ತೆಗೆದುಕೊಳ್ಳಲಾಗದು:''ಕೋವಿಡ್ ಹಗರಣದ ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಮೈಕಲ್ ಕುನ್ಹಾ ಅವರ ಸಮಿತಿ ವರದಿ ನೀಡಿತ್ತು. ಅದರ ಆಧಾರದ ಮೇಲೆ ಕೆಲವು ಕಂಪನಿಗಳಿಗೆ ಹಾಗೂ ತಪ್ಪಿತಸ್ಥರಿಗೆ ನೋಟಿಸ್ ನೀಡಲಾಗಿತ್ತು. ಕೋವಿಡ್ ಹಗರಣದ ಕುರಿತಂತೆ ಏಕಾಏಕಿ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕಾನೂನು ರೀತಿ ಮುನ್ನಡೆಯಬೇಕಾಗುತ್ತದೆ. ಈ ಕಾರಣಕ್ಕೆ ಇಲಾಖೆಯಿಂದ ಹಾಗೂ ಸಿಐಡಿಯಿಂದ ತನಿಖೆ ನಡೆಯುತ್ತಿದೆ. ಆ ಸಂದರ್ಭದಲ್ಲಿ ಸಾಕಷ್ಟು ವ್ಯವಹಾರಗಳು ಸಂಶಯಾಸ್ಪದವಾಗಿವೆ. ಎಲ್ಲವನ್ನೂ ಪರಿಶೀಲನೆ ನಡೆಸುತ್ತಿದ್ದೇವೆ'' ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಮುಂದುವರಿಕೆ: ''ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ/ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಬಿಜೆಪಿಯ ಆರೋಪ ಅರ್ಥಹೀನ. ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಮುಟ್ಟುತ್ತಿವೆ. ಎಸ್‌ಸಿ/ಎಸ್‌ಟಿ, ಓಬಿಸಿ ಸಮುದಾಯಕ್ಕೂ ತಲುಪುತ್ತಿದೆ. ಅವರ ಅಭಿವೃದ್ಧಿಗೆ ಆ ಹಣ ಬಳಸುವುದು ತಪ್ಪಲ್ಲ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ''ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ. ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಸಮಸ್ಯೆ ಇಲ್ಲದೆ ಮುಂದುವರೆಯುತ್ತದೆ. ಎಲ್ಲಾ ವಿಚಾರಗಳಿಗೂ ಗ್ಯಾರಂಟಿ ಯೋಜನೆಯನ್ನೇ ಥಳಕು ಹಾಕುವುದು ಸರಿಯಲ್ಲ'' ಎಂದರು.