ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಜಾರಿ ಮಾಡಿರುವ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ.
ಈ ಅರ್ಜಿಗಳ ತುರ್ತು ವಿಚಾರಣೆಗೆ ಪರಿಗಣಿಸುವಂತೆ ಸೋಮವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರಾದ ವಿಕ್ರಮ್ ಹುಯ್ಲಗೋಳ ಅವರು ಪ್ರಸ್ತಾಪಿಸಿದರು. ವಾದ ಆಲಿಸಿದ ಪೀಠ, ಇಂದು ಸಂಜೆ ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿತು.
ಅರ್ಜಿಯ ವಿವರ :ಅರ್ಜಿದಾರರು ಹಿರಿಯ ನಾಗರೀಕರಾಗಿದ್ದು, ಮೈಸೂರಿನ ಕೆಸರೆ ಗ್ರಾಮದಲ್ಲಿ ಸರ್ವೇ ಸಂಖ್ಯೆ 464ರಲ್ಲಿ ತುಂಡು ಭೂಮಿಯೊಂದನ್ನು ನನ್ನ ಸಹೋದರ ಖರೀದಿಸಿದ್ದರು. ಬಳಿಕ ತನಗೆ 2010ರಲ್ಲಿ ಅರಿಶಿಣ- ಕುಂಕುಮ ನೀಡುವ ಸಲುವಾಗಿ ದಾನವಾಗಿ ನೀಡಿದ್ದರು. ಈ ಜಮೀನು ಸ್ವಾಧೀನವಾಗಿ ಡಿನೋಟಿಫಿಕೇಷನ್ ಮಾಡಲಾಗಿದ್ದು, ಮುಡಾ ಅಭಿವೃದ್ಧಿಪಡಿಸಿತ್ತು. ಇದಕ್ಕಾಗಿ ಪರಿಹಾರ ನೀಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಬಳಿಕ ಜನವತಿ ಪ್ರದೇಶಗಳಲ್ಲಿ ಬದಲಿ ನಿವೇಶನವನ್ನು ಮಂಜೂರು ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.