ಬೆಂಗಳೂರು:ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧ್ಯಕ್ಷ ಸ್ಥಾನಕ್ಕೆ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ಸರ್ಕಾರ, ಶೈಕ್ಷಣಿಕ ವಿದ್ಯಾರ್ಹತೆಯನ್ನು ಸಡಿಲಗೊಳಿಸಿರುವ ಕ್ರಮವನ್ನು ಆಕ್ಷೇಪಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಕುಣಿಗಲ್ ತಾಲೂಕು ಅಮೃತೂರಿನ ಟಿ.ಎನ್.ರವಿಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ವಿಕ್ರಂ ಹುಯಿಲಗೋಳ, ''ಸರ್ಕಾರದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಹತೆಯನ್ನು ಸಡಿಲಗೊಳಿಸಿ ನೇಮಕ ಮಾಡಲು ಮುಂದಾಗಿದೆ. ಅಲ್ಲದೇ, ಈ ಸಂಬಂಧ ಹೈಕೋರ್ಟ್ ಸರಣಿ ಆದೇಶಗಳ ನಂತರ 2020ರಲ್ಲಿ ನ್ಯಾಯಾಲಯ ಅನುಮೋದಿಸಿರುವ ನಿಯಮಗಳಿಗೆ ವಿರುದ್ಧವಾಗಿದೆ" ಎಂದರು.
''ಸರ್ಕಾರ 2020ರ ಜೂನ್ 19ರಂದು ಅಂತಿಮಗೊಳಿಸಿರುವ ನಿಯಮದ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಪರಿಸರ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಅಥವಾ ಎಂಜಿನಿಯರಿಂಗ್ ಪದವಿಯನ್ನು ವಿದ್ಯಾರ್ಹತೆಯಾಗಿ ನಿಗದಿ ಮಾಡಲಾಗಿತ್ತು. ಅದನ್ನು ಇದೇ ನ್ಯಾಯಾಲಯ ಅನುಮೋದಿಸಿದೆ. ಆದರೆ ಸರ್ಕಾರ ಎರಡು ಆದೇಶಗಳನ್ನು ಹೊರಡಿಸಿ ತಿದ್ದುಪಡಿ ಮಾಡಿ ವಿದ್ಯಾರ್ಹತೆಯನ್ನು ಸಡಿಲಗೊಳಿಸಿದೆ. ಹಾಗಾಗಿ, 2020ರಲ್ಲಿ ಅಂತಿಮಗೊಳಿಸಿರುವ ನೇಮಕಾತಿ ನಿಯಮಗಳನ್ನೇ ಪಾಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು'' ಎಂದು ಕೋರಿದರು.
ಸರ್ಕಾರ ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ವಿದ್ಯಾರ್ಹತೆ ಸಡಿಲಗೊಳಿಸಿರುವುದು ಸುಪ್ರಿಂಕೋರ್ಟ್, ಹೈಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶಗಳಿಗೆ ತದ್ವಿರುದ್ಧವಾಗಿದೆ. ಜೊತೆಗೆ ಇದು ಜಲ ಮಾಲಿನ್ಯ ನಿಯಂತ್ರಣ ಮತ್ತು ತಡೆ ಕಾಯಿದೆ -1974ರ ಉಲ್ಲಂಘನೆಯಾಗಿದೆ. ಸದ್ಯ ಇನ್ನೂ ಸರ್ಕಾರ ಯಾರನ್ನೂ ನೇಮಕ ಮಾಡಿಲ್ಲ, ಅರ್ಜಿಗಳನ್ನು ಆಹ್ವಾನಿಸಿದೆ ಅಷ್ಟೇ. ಹಾಗಾಗಿ, ಇದೀಗ ಸರ್ಕಾರ ನಡೆಸುತ್ತಿರುವ ನೇಮಕವನ್ನು ಸ್ಥಗಿತಗೊಳಿಸಿ, ಮೊದಲು ನಿಗದಿಪಡಿಸಿರುವ ವಿದ್ಯಾರ್ಹತೆ ಅನ್ವಯವೇ ನೇಮಕ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸರ್ಕಾರದ ಪರ ವಕೀಲರು, ''ಈ ಸಂಬಂಧ ಸರ್ಕಾರದಿಂದ ಮಾಹಿತಿ ಪಡೆದು ವಿವರಣೆ ಪಡೆಯಬೇಕಾಗಿದ್ದು, ಒಂದೆರಡು ದಿನ ಕಾಲಾವಕಾಶ ನೀಡಬೇಕು'' ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಾಲಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿ, ಅಂದು ಸರ್ಕಾರ ಈ ವಿಚಾರದ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿತು.
ಇದನ್ನೂ ಓದಿ:'ಜಾತಿ ಪ್ರಮಾಣಪತ್ರ ಕುರಿತ ಚುನಾವಣಾ ತಕರಾರು ಅರ್ಜಿ ನಿರ್ಧರಿಸಲು ಹೈಕೋರ್ಟ್‌ಗೆ ಅಡ್ಡಿಯಿಲ್ಲ'