ಕರ್ನಾಟಕ

karnataka

ETV Bharat / state

6 ಲಕ್ಷ ಸದಸ್ಯರಿರುವ ಸಂಘಕ್ಕೆ ನಾಲ್ವರು ದೂರು ನೀಡಿದರೆ ಆಡಳಿತಾಧಿಕಾರಿ ನೇಮಿಸಬಹುದೇ?: ಸರ್ಕಾರಿ ನೌಕರರ ಸಂಘ ಪ್ರಶ್ನೆ - PETITION IN HIGH COURT

ರಾಜ್ಯ ಸರ್ಕಾರಿ ನೌಕರರ ಸಂಘದ ಆಡಳಿತಾಧಿಕಾರಿಯನ್ನಾಗಿ ಕೆಎಎಸ್ ಅಧಿಕಾರಿ ಸಿ.ಎನ್.ಮಂಜುನಾಥ್ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆಯು ಹೈಕೋರ್ಟ್​ನಲ್ಲಿ ನಡೆಯಿತು.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : Oct 23, 2024, 10:45 PM IST

ಬೆಂಗಳೂರು:ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಒಂದು ದೊಡ್ಡ ಸಂಘಕ್ಕೆ ಇಬ್ಬರು ಮಾಜಿ ಅಧ್ಯಕ್ಷರು, ಮತ್ಯಾರೋ ನಾಲ್ವರು ಸದಸ್ಯರು ಕೊಟ್ಟ ದೂರು ಆಧರಿಸಿ ಆಡಳಿತಾಧಿಕಾರಿ ನೇಮಕ ಮಾಡಿದರೆ ಹೇಗೆ ಎಂದು ಸರ್ಕಾರದ ಕ್ರಮವನ್ನು ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಶ್ನಿಸಿದೆ.

ಕೆಎಎಸ್ ಅಧಿಕಾರಿ ಸಿ.ಎನ್. ಮಂಜುನಾಥ್ ಅವರನ್ನು ಸಂಘಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಅ.7ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರ ಸಂಘದ ಪರ ವಾದ ಮಂಡಿಸಿದ ವಕೀಲರು, ''ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಇಬ್ಬರು ಮಾಜಿ ಅಧ್ಯಕ್ಷರು ದೂರು ಕೊಟ್ಟರು, ಮತ್ಯಾರೋ ನಾಲ್ವರು ಸದಸ್ಯರು ದೂರು ಕೊಟ್ಟರೆಂಬ ಮಾತ್ರಕ್ಕೆ ಇಂತಹ ದೊಡ್ಡ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಕ್ರಮ ಒಪ್ಪಲಾಗದು. ದೂರು ಕೊಟ್ಟಿರುವ ನಾಲ್ವರು ಸದಸ್ಯರ ಪೈಕಿ ಮೂವರು ಸೇವೆಯಿಂದ ಅನೇಕ ಬಾರಿ ಅಮಾನತ್ತುಗೊಂಡ ಹಿನ್ನೆಲೆಯನ್ನು ಹೊಂದಿದ್ದಾರೆ'' ಎಂದರು.

''ದೂರು ಬಂದಿದೆ, ಸಂಘದ ಆಡಳಿತ ಮಂಡಳಿಯ ಅವಧಿ ಮುಗಿದಿದೆ ಎಂಬ ಕಾರಣಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಆದರೆ, ಆಡಳಿತ ಮಂಡಳಿ ಪದಾಧಿಕಾರಿಗಳ ಅಧಿಕಾರಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ. ಒಂದೆಡೆ ಸಂಘದ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದೆ. ಇಂತಹ ಸಂದರ್ಭದಲ್ಲಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸರಿಯಲ್ಲ. ಆಡಳಿತಾಧಿಕಾರಿ ನೇಮಕವು ಚುನಾವಣೆ ಪ್ರಕ್ರಿಯೆಯಲ್ಲಿ ಬಲವಂತದ ಹಸ್ತಕ್ಷೇಪ ಆಗಲಿದೆ'' ಎಂದು ಪೀಠಕ್ಕೆ ತಿಳಿಸಿದರು.

ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆ ನೀಡಬೇಕು ಹಾಗೂ ತಮ್ಮನ್ನು ಈ ಪ್ರಕರಣದಲ್ಲಿ ಅರ್ಜಿದಾರರನ್ನಾಗಿ ಸೇರಿಸಬೇಕು ಎಂದು ಸಂಘದ ಸದಸ್ಯರಾದ ಚಂದ್ರಶೇಖರ್ ನುಗ್ಲಿ, ಶಿವರುದ್ರಯ್ಯ, ನಿಂಗೇಗೌಡ, ಕೃಷ್ಣಮೂರ್ತಿ ಎಂಬುವರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್, ''ಸಂಘಕ್ಕೆ 2019ರಲ್ಲಿ ಚುನಾವಣೆ ನಡೆದಿತ್ತು. 2024ರ ಜೂ.6ಕ್ಕೆ ಅವಧಿ ಅಂತ್ಯ ಆಗಿದೆ. ಅವಧಿ ವಿಸ್ತರಣೆ ಅಥವಾ ಅವಧಿ ಮುಗಿದ ಬಳಿಕ ಪದಾಧಿಕಾರಿಗಳು ಮುಂದುವರಿಯಲು ಅವಕಾಶವಿಲ್ಲ'' ಎಂದರು.

''ಸದ್ಯ ಯಾವುದೇ ಅಧಿಕಾರ ಹೊಂದಿಲ್ಲದ ಆಡಳಿತ ಮಂಡಳಿಯ ಮುಂದಾಳತ್ವದಲ್ಲಿ ಚುನಾವಣೆ ನಡೆದರೆ ಪಾರದರ್ಶಕತೆ ನಿರೀಕ್ಷಿಸಲಾಗದು. ಈಗಿರುವ ಚುನಾವಣಾಧಿಕಾರಿಯನ್ನು ಆಡಳಿತ ಮಂಡಳಿಯೇ ನೇಮಿಸಿದ್ದು, ಚುನಾವಣಾ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡುವುದು ನಮ್ಮ ಉದ್ದೇಶವಲ್ಲ. ಚುನಾವಣಾ ಪ್ರಕ್ರಿಯೆ ನಡೆಸಲು ನ್ಯಾಯಾಲಯವೇ ಒಬ್ಬ ಸ್ವತಂತ್ರ ವ್ಯಕ್ತಿಯನ್ನು ನೇಮಿಸಲಿ. ಕೋರ್ಟ್ ಮೇಲ್ವಿಚಾರಣೆಯಲ್ಲೇ ಚುನಾವಣೆ ನಡೆಯಲಿ. ಬೇಕಾದಷ್ಟು ವಿಚಾರಗಳನ್ನು ನ್ಯಾಯಾಲಯಕ್ಕೆ ತಿಳಿಸಲಿಕ್ಕಿದೆ ಹಾಗೂ ಮಧ್ಯಂತರ ಅರ್ಜಿದಾರರನ್ನು ಪ್ರಕರಣದಲ್ಲಿ ಪರಿಗಣಿಸಬೇಕು'' ಎಂದು ಮನವಿ ಮಾಡಿದರು.

ಇದನ್ನೂ ಓದಿ:ಮಾಜಿ ಎಂಎಲ್​ಸಿ ಹೆಚ್.ಎಂ.ರಮೇಶ್‌ ಗೌಡ ವಿರುದ್ಧದ ಎಫ್ಐಆರ್​ಗೆ ಕಾರಣ ನೀಡಿ: ಹೈಕೋರ್ಟ್

ABOUT THE AUTHOR

...view details