ಬೆಂಗಳೂರು:ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವ ಕ್ರಮಕ್ಕೆ ನೀಡಿರುವ ತಡೆ ತೆರವು ಕೋರಿ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 5ಕ್ಕೆ ನಿಗದಿಪಡಿಸಿದೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ, ರಾಜ್ಯ ಸರ್ಕಾರ ಜುಲೈ 26ರಂದು ಪ್ರಾಧಿಕಾರ ರಚನೆ ಕುರಿತ ಕಾಯ್ದೆ ಜಾರಿಗೊಳಿಸಬಾರದು ಎಂದು ಆದೇಶಿಸಿತ್ತು. ಆದರೆ ಸರ್ಕಾರ ಜೂನ್ 28ರಂದೇ ಕಾಯ್ದೆ ಜಾರಿಗೆ ಆದೇಶ ಹೊರಡಿಸಿದ್ದು, ಜುಲೈ 1ರಿಂದಲೇ ಕಾಯ್ದೆ ಜಾರಿಗೆ ಬಂದಿದೆ. ಹಾಗಾಗಿ, ಹೈಕೋರ್ಟ್ ಮಧ್ಯಂತರ ಅದೇಶ ತೆರವು ಮಾಡಬೇಕು ಎಂದು ಸರ್ಕಾರ ತನ್ನ ಮಧ್ಯಂತರ ಅರ್ಜಿಯಲ್ಲಿ ಕೋರಿದೆ.
ಸರ್ಕಾರದ ಈ ಮಧ್ಯಂತರ ಅರ್ಜಿಯನ್ನು ಆಗಸ್ಟ್ 22ರಂದು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತ್ತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ''ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆಕ್ಷೇಪ ವ್ಯಕ್ತಪಡಿಸಿ ಪ್ರಮೋದಾದೇವಿ ಒಡೆಯರ್ ಸಲ್ಲಿಸಿರುವ ಅರ್ಜಿಯಲ್ಲಿ ನ್ಯಾಯಾಲಯ ಜುಲೈ 26ರಂದು ನ್ಯಾಯಾಲಯದ ಮುಂದಿನ ಆದೇಶದವರೆಗೆ ಪ್ರಾಧಿಕಾರ ರಚನೆ ಕಾಯ್ದೆ ಜಾರಿಗೊಳಿಸಬಾರದು ಎಂದು ಮಧ್ಯಂತರ ಆದೇಶ ನೀಡಿತ್ತು. ಆನಂತರ ಆ ಮಧ್ಯಂತರ ಆದೇಶವನ್ನು ಮತ್ತೆ ವಿಸ್ತರಿಸಿದೆ'' ಎಂದರು.
''ಅಲ್ಲದೆ, ವಾಸ್ತವವಾದ ಕೋರ್ಟ್ ಆದೇಶ ನೀಡುವ ಮುನ್ನವೇ ಅಂದರೆ ಜೂನ್ 28ರಂದೇ ಸರ್ಕಾರ ಪ್ರಾಧಿಕಾರ ರಚನೆ ಕುರಿತು ಅಧಿಸೂಚನೆ ಹೊರಡಿಸಿದ್ದು, ಜುಲೈ 1ರಿಂದ ಕಾಯ್ದೆ ಜಾರಿಗೆ ಬಂದಿದೆ. ಪ್ರಾಧಿಕಾರದ ಕಾರ್ಯದರ್ಶಿಯನ್ನಾಗಿ ಕೆಎಎಸ್ ಅಧಿಕಾರಿ ಎಂ.ಜೆ. ರೂಪಾ ಅವರನ್ನು ನೇಮಕ ಮಾಡಲಾಗಿದೆ. ಹಾಗಾಗಿ, ನ್ಯಾಯಾಲಯದ ಮಧ್ಯಂತರ ಆದೇಶ ಊರ್ಜಿತವಲ್ಲ'' ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಆದರೆ, ಪ್ರಮೋದಾದೇವಿ ಒಡೆಯರ್ ಪರ ವಕೀಲರು ಮತ್ತೆ ಮಧ್ಯಂತರ ಆದೇಶವನ್ನು ನೀಡಬೇಕು ಎಂದು ಕೋರಿದರು. ಆ ಹಿನ್ನೆಲೆಯಲ್ಲಿ ನ್ಯಾಯಾಲಯ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಒಡೆಯರ್ ಪರ ವಕೀಲರಿಗೆ ಸೂಚನೆ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿತು.
ಇದನ್ನೂ ಓದಿ:ದಾಖಲೆಗಳಲ್ಲಿ ಹೆಸರು ಬದಲಾಯಿಸಿ ಮತ್ತೊಬ್ಬರ ಹೆಸರಿದ್ದ ತಕ್ಷಣ ಆಸ್ತಿ ಮಾಲೀಕತ್ವ ಬದಲಾಗದು: ಹೈಕೋರ್ಟ್ - High Court