ಬೆಂಗಳೂರು: ಕರ್ನಾಟಕದಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳ ಉದ್ಯೋಗಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ (ಕನ್ನಡಿಗರಿಗೆ) ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಜಾಗೊಳಿಸಿದೆ.
ನಗರದ ಬಿಲೇಕಹಳ್ಳಿಯ ಸೋಮೇಶ್ವರ ಲೇಔಟ್‌ನ ಲೆಕ್ಕ ಪರಿಶೋಧಕಿ ಡಾ.ಆರ್.ಅರ್ಮಿತಲಕ್ಷ್ಮಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚರಣೆ ಡನೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅರ್ಜಿ ಪರಿಶೀಲಿಸಿದ ನ್ಯಾಯಪೀಠ, ಹರಿಯಾಣ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು ಆಧರಿಸಿ ಅರ್ಜಿದಾರರು ಈ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಹರಿಯಾಣ ಸರ್ಕಾರವು ತನ್ನ ರಾಜ್ಯದ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸಿ ಶಾಸನಾತ್ಮಕವಾದ ಕಾಯ್ದೆ ರೂಪಿಸಿತ್ತು. ಕರ್ನಾಟಕದಲ್ಲಿ ಅರ್ಜಿದಾರರು ಆಕ್ಷೇಪಿಸಿರುವ ವಿಧೇಯಕ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿಲ್ಲ. ವಿಧೇಯಕ ಸದ್ಯ ಕರಡು ಸ್ವರೂಪದಲ್ಲಿದ್ದು, ಕಾನೂನಿನ ಮಾನ್ಯತೆ ಪಡೆದುಕೊಂಡಿಲ್ಲ. ಆದ್ದರಿಂದ ವಿಧೇಯಕವು ಕಾನೂನಿನ ಗುಣಲಕ್ಷಣ ಹೊಂದಿರುವುದಾಗಿ ನ್ಯಾಯಾಲಯ ಭಾವಿಸಲಾಗದು ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಅರ್ಜಿ ಅಪಕ್ವವಾಗಿರುವ ಕಾರಣ ಮೆರಿಟ್ ಮೇಲೆ ವಿಚಾರಣೆ ನಡೆಸದೆ ಮತ್ತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿತು.
ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ಕರ್ನಾಟಕ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಗಳಲ್ಲಿ ಮೀಸಲು ಕಲ್ಪಿಸಿದ ವಿಧೇಯಕ ಕುರಿತು 2024ರ ಜು.11ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲ ಅನುಮೋದನೆ ನೀಡಿರುವ ಬಗ್ಗೆ ಜು.16 ರಂದು ದಿನ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದೆ. ಈ ವಿಧೇಯಕವನ್ನು ಪ್ರಶ್ನಿಸಿ ಜು.19ರಂದು ಈ ಅರ್ಜಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಅಲ್ಲದೆ, ಇದೇ ಮಾದರಿಯ ಕಾನೂನನ್ನು ಹರಿಯಾಣ ಸರ್ಕಾರ ರಚಿಸಿತ್ತು. ಆ ಬಗ್ಗೆ ಮೆರಿಟ್ ಮೇಲೆ ವಿಚಾರಣೆ ನಡೆಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಆ ಕಾನೂನು ಅನ್ನು ರದ್ದುಪಡಿಸಿದೆ. ಖಾಸಗಿ ವಲಯದ ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲು ಕಲ್ಪಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕರ್ನಾಟಕದಲ್ಲಿ ಇದೇ ಆಡಳಿತ ವಿಭಾಗದ ಹುದ್ದೆಗಳಲ್ಲಿ ಶೇ.75ರಷ್ಟು ಮತ್ತು ಆಡಳಿತಯೇತರ ವಿಭಾಗದ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲು ಕಲ್ಪಿಸಲು ವಿಧೇಯಕದಲ್ಲಿ ಹೇಳಲಾಗಿದೆ. ಇದು ಸ್ಥಳಿಯರ ಅಭ್ಯರ್ಥಿಗಳ ಪ್ರಯೋಜನಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.