ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕು ವರ್ಷದ ಪುಟ್ಟ ಮಗುವನ್ನು ರಾಟ್‌ವೈಲರ್ ತಳಿಯ ನಾಯಿಯೊಂದು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ರಿಶಾನ್ (4) ಗಾಯಗೊಂಡ ಬಾಲಕ. ಜನವರಿ 5ರಂದು ಇಂದಿರಾನಗರದ ಕದಿರೈಯ್ಯನಪಾಳ್ಯದಲ್ಲಿ ಘಟನೆ ನಡೆದಿದ್ದು, ನಾಯಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಾಯ್ತು?: ಕೇರಳ ಮೂಲದ ರಿಶಾದ್ ಮತ್ತು ರಸಿಕಾ ದಂಪತಿ ಪುತ್ರ ರಿಶಾನ್‌ನೊಂದಿಗೆ ತಮ್ಮ ಮನೆಯಲ್ಲಿದ್ದರು. ಅದೇ ಕಟ್ಟಡದಲ್ಲಿ ವಾಸವಿದ್ದ ಮಂಗೇಶ್ವರಿ ಹಾಗೂ ಅವರ ಪುತ್ರ ಸಂಜಯ್ ಕಳೆದ ಹಲವು ತಿಂಗಳಿನಿಂದ ರಾಟ್‌ವೈಲರ್ ತಳಿಯ ನಾಯಿಯೊಂದನ್ನು ಸಾಕುತ್ತಿದ್ದಾರೆ. ನಾಯಿಯನ್ನು ಕಟ್ಟಿಹಾಕುವಂತೆ ರಿಶಾದ್ ಸಾಕಷ್ಟು ಬಾರಿ ಹೇಳಿದ್ದರೂ ಅವರು ಕಿವಿಗೊಟ್ಟಿರಲಿಲ್ಲ. ಜನವರಿ 5ರಂದು ಮನೆ ಬಳಿ ಆಟವಾಡುತ್ತಿದ್ದ ರಿಶಾನ್‌ನನ್ನು ಮೆಟ್ಟಿಲುಗಳ ಮೇಲೆ ಎಳೆದೊಯ್ದ ನಾಯಿ ಕಚ್ಚಲಾರಂಭಿಸಿದೆ. ಮಗನ ಚೀರಾಟ ಕೇಳಿದ ತಂದೆ ರಿಶಾದ್ ಓಡಿ ಹೋಗಿ ನಾಯಿಯ ಬಾಯಿಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ರಿಶಾದ್ ಅವರಿಗೂ ಸಹ ಕಚ್ಚಿ ಗಾಯಗೊಳಿಸಿದೆ. ಗಾಯಾಳು ಬಾಲಕ ಹಾಗೂ ಆತನ ತಂದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.