ಬೆಂಗಳೂರು :ಚಿಂದಿ ಆಯುವವನ ಯಡವಟ್ಟಿನಿಂದಾಗಿ ಬಾಂಬ್ ನಿಷ್ಕ್ರಿಯದಳದವರು ಹಾಗೂ ಸಾರ್ವಜನಿಕರು ಹೈರಾಣಾದ ಘಟನೆ ಸೋಮವಾರ ಬೆಳಗ್ಗೆ ಮಿನರ್ವ ಸರ್ಕಲ್ ಬಳಿ ನಡೆದಿದೆ. ಖಾಸಗಿ ಬ್ಯಾಂಕಿನ ಎಟಿಎಂ ಪಕ್ಕದಲ್ಲಿ ಚಿಂದಿ ಆಯುವಾತ ಇಟ್ಟಿದ್ದ ಬಾಕ್ಸ್ ಕಂಡು ಗಾಬರಿಯಾದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸ್ ಹಾಗೂ ಬಾಂಬ್ ನಿಷ್ಕ್ರಿಯದಳದವರು ಬಂದು ತಪಾಸಣೆ ನಡೆಸಿದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.
ಎಟಿಎಂ ಹಣ ತುಂಬುವ ಬಾಕ್ಸ್:ಫೆಬ್ರವರಿ 12ರ ಬೆಳಗ್ಗೆ 8.30ರ ಸುಮಾರಿಗೆ ಜೆಸಿ ರಸ್ತೆಯ ಮಿನರ್ವ ಸರ್ಕಲ್ ಬಳಿಯಿರುವ ಖಾಸಗಿ ಬ್ಯಾಂಕಿನ ಎಟಿಎಂ ಸಮೀಪದಲ್ಲಿ ಎರಡ್ಮೂರು ಖಾಲಿ ಬಾಕ್ಸ್ಗಳು ಪತ್ತೆಯಾಗಿದ್ದವು. ಅವುಗಳನ್ನ ಗಮನಿಸಿದ್ದ ಎಟಿಎಂ ಸೆಕ್ಯೂರಿಟಿ ಗಾರ್ಡ್ ಹತ್ತಿರ ಹೋಗಿ ನೋಡಿದಾಗ ಇದೊಂದು ಎಟಿಎಂ ಮಷಿನ್ನಲ್ಲಿ ಹಣ ತುಂಬುವ ಬಾಕ್ಸ್ ಎಂಬುದು ಗೊತ್ತಾಗಿತ್ತು. ತಕ್ಷಣ ಆತ ಕಲಾಸಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಬಂದ ಪೊಲೀಸರು ಅಕ್ಕಪಕ್ಕದ ಎಟಿಎಂ, ಬ್ಯಾಂಕ್ಗಳಲ್ಲಿ ಏನಾದರೂ ರಾಬರಿಯಾಗಿರಬಹುದಾ ಎಂದು ಪರಿಶೀಲನೆ ನಡೆಸಿದ್ದರು. ಅಷ್ಟೇ ಅಲ್ಲದೆ, ಬಾಂಬ್ ನಿಷ್ಕ್ರಿಯ ದಳವನ್ನು ಕರೆಯಿಸಿ ಪರಿಶೀಲಿಸಿದ್ದರು. ಆದರೆ, ಬಾಕ್ಸ್ ತೆರೆಸಿದಾಗ ಅವು ಖಾಲಿ ಬಾಕ್ಸ್ಗಳು ಎಂಬುದು ತಿಳಿದು ಬಂದಿತ್ತು.