ಬೆಳಗಾವಿ :ಕೆಎಸ್ಆರ್ಟಿಸಿ ದರ ಪರಿಷ್ಕರಣೆಗೆ ನಿರ್ಧರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೆಡೆ ಮಹಿಳೆಯರಿಗೆ ಉಚಿತ ಬಸ್ ಭಾಗ್ಯ ನೀಡಿ, ಮತ್ತೊಂದೆಡೆ ಪುರುಷರಿಗೆ ಶೇ.15 ರಷ್ಟು ದರ ಏರಿಸುವ ಮೂಲಕ ನಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ನೀತಿ ಹೇಗಿದೆ ಎಂದರೆ?- ಜನ ಹೇಳೋದು ಹೀಗೆ:ಈ ಬಗ್ಗೆ ಶೀಗಿಹಳ್ಳಿ ಗ್ರಾಮದ ಬಾಳೇಶ ಎಂಬುವವರು ಈಟಿವಿ ಭಾರತದೊಂದಿಗೆ ಮಾತನಾಡಿ, ''ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಆಗಿದ್ದಕ್ಕೆ ಈ ರೀತಿ ಎಲ್ಲ ದರ ಹೆಚ್ಚಳ ಮಾಡುತ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬರಲು ಬರೀ ಮಹಿಳೆಯರಷ್ಟೇ ಮತ ಚಲಾಯಿಸಿದ್ದಾರಾ? ನಾವು ಇವರಿಗೆ ಮತ ಹಾಕಿಲ್ಲವೇ? ಕೇವಲ ಮಹಿಳೆಯರಿಗಷ್ಟೇ ಉಚಿತ ಕೊಟ್ಟರೆ ನಾವು ಏನು ಮಾಡಬೇಕು? ನಮ್ಮ ಕಡೆ ತೆಗೆದುಕೊಂಡು ಅವರಿಗೆ ಕೊಡುತ್ತಿದ್ದಾರೆ. ಇದು ಅಳಿಯ ಅಲ್ಲ ಮಗಳ ಗಂಡ ಎನ್ನುವಂತಾಗಿದೆ. ಈ ಸರ್ಕಾರ ಸರಿ ಇಲ್ಲ. ಇದರಿಂದ ಮನೆಯಲ್ಲಿ ಮಹಿಳೆಯರು ನಮ್ಮ ಮಾತು ಕೇಳದ ಸ್ಥಿತಿ ನಿರ್ಮಾಣ ಆಗಿದೆ'' ಎಂದು ಕಿಡಿಕಾರಿದರು.
ಕೆಎಸ್ಆರ್ಟಿಸಿ ಪ್ರಯಾಣದ ದರ ಏರಿಕೆ ಕುರಿತು ಪ್ರಯಾಣಿಕರು ಮಾತನಾಡಿದ್ದಾರೆ (ETV Bharat) ’ಗ್ಯಾರಂಟಿಯೇನೋ ಲಾಭ ತಂದಿದೆ, ಬಸ್ ದರ ಏರಿಕೆ ದುಡಿಯುವ ವರ್ಗಕ್ಕೆ ಬರೆ ಹಾಕಿದೆ‘;''ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ತುಂಬ ಅನುಕೂಲವಾಗಿದೆ. ಹೊಲಿಗೆ ಯಂತ್ರ, ದಿನನಿತ್ಯ ಉಪಯೋಗಕ್ಕೆ ಮನೆ ವಸ್ತುಗಳನ್ನು ಖರೀದಿಸಿದ್ದೇವೆ. ಆದರೆ, ಈಗ ಏಕಾಏಕಿ ಬಸ್ ದರ ಹೆಚ್ಚಳ ಮಾಡುವುದರಿಂದ ದಿನನಿತ್ಯ ದುಡಿಯುವ ವರ್ಗದವರಿಗೆ ತುಂಬಾ ತೊಂದರೆ ಆಗುತ್ತದೆ. ಹಾಗಾಗಿ, ಮೊದಲಿನ ದರವನ್ನೆ ಮುಂದುವರಿಸಲಿ'' ಎಂದು ಸತ್ತಿಗೇರಿ ಗ್ರಾಮದ ಮಹಾದೇವ ಅವರು ಆಗ್ರಹಿಸಿದರು.
’ಎಣ್ಣೆ ಆಯ್ತು, ಇಂಧನ ಆಯ್ತು ಈಗ ಬಸ್ ದರ, ನಾವ್ ಏನ್ ಮಾಡೋಣ ನೀವೇ ಹೇಳಿ’:ವಡಗಾವ ನಿವಾಸಿ ಸಂಜಯ ಜಯಗೌಡ ಅವರು ಮಾತನಾಡಿ, ''ರಾಜ್ಯ ಸರ್ಕಾರ ಇಷ್ಟು ದಿನ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿತ್ತು. ಆದರೆ, ಈಗ ಬಸ್ ದರ ಏರಿಸಿ ಪುರುಷರ ಹಣವನ್ನು ಮಹಿಳೆಯರಿಗೆ ಕೊಡುತ್ತಿರುವುದು ಸರಿಯಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡಿ. ಅವರೇ ನಿಮಗೆ ತೆರಿಗೆ ರೂಪದಲ್ಲಿ ಹಣ ಪಾವತಿಸುತ್ತಾರೆ. ಅದನ್ನು ಬಿಟ್ಟು ಒಂದು ಕಡೆ ಕೊಟ್ಟು, ಒಂದು ಕಡೆ ಕಿತ್ತುಕೊಳ್ಳುವುದು ಸರಿ ಅಲ್ಲ. ಕೂಡಲೇ ಪುಕ್ಕಟೆ ಯೋಜನೆಗಳನ್ನು ನಿಲ್ಲಿಸಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು'' ಎಂದು ಒತ್ತಾಯಿಸಿದರು.
ಇದನ್ನೂ ಓದಿ :ಪ್ರತಿದಿನ ತೆರಿಗೆ ಹೆಚ್ಚಿಸುವುದೇ ರಾಜ್ಯ ಸರ್ಕಾರದ ಸಾಧನೆ; ಬಸ್ ಟಿಕೆಟ್ ದರ ಹೆಚ್ಚಳ ಖಂಡಿಸಿ ಬಿಜೆಪಿ ಪ್ರತಿಭಟನೆ - BJP PROTEST