ಬೆಂಗಳೂರು:ಚಲಿಸುತ್ತಿರುವ 'ನಮ್ಮ ಮೆಟ್ರೋ' ರೈಲಿನಲ್ಲಿ ಯುವಕ - ಯುವತಿಯ ಆಪ್ತ ವರ್ತನೆಗೆ ಸಹ ಪ್ರಯಾಣಿಕರಿಂದ ಅಸಮಾಧಾನ ವ್ಯಕ್ತವಾಗಿದೆ. ರೈಲಿನಲ್ಲಿನ ಇತರರಿಗೆ ಮುಜುಗರ ಆಗದಂತೆ ಎಲ್ಲ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಬಿಎಂಆರ್ಸಿಎಲ್ಗೆ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದ್ದು, ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ದೆಹಲಿ ಮೆಟ್ರೋ ರೈಲಿನಲ್ಲಿ ಯುವಕ - ಯುವತಿಯರ ಇಂತಹ ವರ್ತನೆ ನಡೆಯುತ್ತಿದ್ದವು. ಆದರೀಗ ಬೆಂಗಳೂರು ಮೆಟ್ರೋಕ್ಕೂ ಅದು ವಿಸ್ತರಿಸಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಮೆಟ್ರೋದಲ್ಲಿ ಏನಾಗುತ್ತಿದೆ? ಯುವಕನನ್ನು ಅಪ್ಪಿಕೊಂಡ ಯುವತಿ ಅಕ್ಷರಶಃ ಚುಂಬಿಸುತ್ತಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ಶಾಲಾ - ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲಾ ವಯೋಮಾನದವರು ಪ್ರಯಾಣಿಸುತ್ತಾರೆ. ಈ ರೀತಿಯ ನಡವಳಿಕೆ ಸರಿಯಲ್ಲ ಎಂದಿದ್ದಾರೆ. ಇನ್ನೂ ಕೆಲವರು, ಇದರಲ್ಲಿ ಅಸಭ್ಯ ವರ್ತನೆ ಏನಿದೆ. ಆಲಂಗಿಸಿಕೊಂಡು ನಿಂತಿದ್ದಾರಷ್ಟೇ, ಇನ್ನೇನೂ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ, ವಿಡಿಯೋ ಅನ್ನು ಬಿಎಂಆರ್‌ಸಿಎಲ್, ನಮ್ಮ ಮೆಟ್ರೋ ಹಾಗೂ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ವಹಿಸುವಂತೆ ಆಗ್ರಹಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋ ಪೋಸ್ಟ್ಗೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿ, ಈ ಬಗ್ಗೆ ಕ್ರಮ ವಹಿಸಲಾಗುವುದು. ಘಟನೆ ಸಂಬಂಧ ಮಾಹಿತಿ ನೀಡಿ ಎಂದು ರೀ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಶರ್ಟ್ ಗುಂಡಿ ಇಲ್ಲದಿರುವುದಕ್ಕೆ ಮೆಟ್ರೋ ಹತ್ತಲು ಬಿಡದೇ ಕಾರ್ಮಿಕನಿಗೆ ಅಪಮಾನ ಆರೋಪ; ಬಿಎಂಆರ್‌ಸಿಎಲ್ ಪ್ರತಿಕ್ರಿಯೆ - Namma Metro