ಹು-ಧಾ ರಾಷ್ಟ್ರೀಯ ಹೆದ್ದಾರಿ ಟೋಲ್ ಅವಧಿ ಮುಗಿದಿದ್ದರೂ ಹಣ ವಸೂಲಿ: ಕೇಂದ್ರ ಸಚಿವರು ಹೇಳಿದ್ದು ಹೀಗೆ (ETV Bharat) ಧಾರವಾಡ: ಹು-ಧಾ ಅವಳಿ ನಗರ ಮಧ್ಯೆ ಇರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಎರಡು ಕಡೆಯ ನಂದಿ ಹೈವೇ ಡೆವೆಲಪರ್ಸ್ ಲಿಮಿಟೆಡ್ನ ಟೋಲ್ ಸಂಗ್ರಹ ಗುತ್ತಿಗೆ ಅವಧಿ ಮುಗಿದಿದ್ದರೂ, ಟೋಲ್ ವಸೂಲಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಧಾರವಾಡ ಹುಬ್ಬಳ್ಳಿ ಮಧ್ಯದ 31 ಕಿ.ಮೀ ರಸ್ತೆ ಮಾತ್ರ, ನಿರ್ಮಾಣಗೊಂಡ 1998ರಿಂದಲೂ ದ್ವಿಪಥವಾಗಿದೆ. ಹೀಗಾಗಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅನೇಕ ಜೀವಹಾನಿಯಾಗಿದೆ. ಇದರಿಂದಾಗಿ ಇದನ್ನು ಕಿಲ್ಲರ್ ಬೈಪಾಸ್ ಎಂದು ಅಂತಲೂ ಸ್ಥಳೀಯರು ಕರೆಯುತ್ತಾರೆ. ಈ ಬೈಪಾಸ್ ನಿರ್ಮಿಸಿದ್ದ ನಂದಿ ಹೈವೇ ಡೆವೆಲಪರ್ಸ್ ಲಿಮಿಟೆಡ್, ಧಾರವಾಡ ಹೊರವಲಯದ ನರೇಂದ್ರ ಮತ್ತು ಹುಬ್ಬಳ್ಳಿ ಹೊರವಲಯದ ಗಬ್ಬೂರ ಬಳಿ 2000ನೇ ಇಸವಿಯಿಂದ ಟೋಲ್ ವಸೂಲಿ ಮಾಡುತ್ತಿದೆ.
ಸುಮಾರು 31ಕಿ.ಮೀ. ಉದ್ದದ ಈ ರಸ್ತೆ ನಿರ್ಮಿಸಿ, 25 ವರ್ಷಗಳ ಕಾಲ ಟೋಲ್ ವಸೂಲಿಗೆ ಗುತ್ತಿಗೆ ನೀಡಲಾಗಿತ್ತು. ಕೇವಲ 30 ಕಿ.ಮೀ. ರಸ್ತೆಯಲ್ಲಿಯೇ ಎರಡು ಕಡೆಗಳಲ್ಲಿ ಟೋಲ್ ವಸೂಲಿ ಮಾಡಲಾಗುತ್ತಿದೆ. ಇದೇ ವರ್ಷದ ಮೇ 4ಕ್ಕೆ ಟೋಲ್ ಅವಧಿ ಮುಕ್ತಾಯವಾಗಿತ್ತು. ಆದರೆ ಕಂಪನಿಯ ಮನವಿ ಮೇರೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಟೋಲ್ ವಸೂಲಿಯನ್ನು 49 ದಿನಗಳ ಕಾಲ ಹೆಚ್ಚಿಸಿ, ಜೂನ್ 23ರ ವರೆಗೆ ಅವಕಾಶ ನೀಡಿತ್ತು. ಅದರ ಬೆನ್ನಲ್ಲೇ ಈಗ ಪುನಃ ಆ ಅವಧಿಯನ್ನು 75 ದಿನಗಳವರೆಗೆ ವಿಸ್ತರಿಸಿ ಸೆಪ್ಟೆಂಬರ್ವರೆಗೂ ಅವಕಾಶ ಕೊಟ್ಟಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕೂಡಲೇ ಟೋಲ್ ನಿಲ್ಲಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಟೋಲ್ ಸಂಗ್ರಹಣೆಗೆ ಮತ್ತೆ ಮತ್ತೆ ಅವಧಿ ವಿಸ್ತರಿಸಿರುವ ಸರ್ಕಾರದ ಕ್ರಮಕ್ಕೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗುವುದಕ್ಕೆ ಕಾರಣವೂ ಇದೆ. ಇಷ್ಟು ವರ್ಷ ಟೋಲ್ ಸಂಗ್ರಹಿಸಿರುವ ಕಂಪನಿ ರಸ್ತೆಯನ್ನು ಸರಿಯಾಗಿ ನಿರ್ವಹಿಸಿಲ್ಲ. ಅನೇಕ ಅಪಘಾತಗಳಾದರೂ ತಲೆ ಕೆಡಿಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ 580 ಕೋಟಿ ರೂಪಾಯಿ ಅನುದಾನದಲ್ಲಿ ಷಟ್ಪಥ ರಸ್ತೆಯನ್ನು ನಿರ್ಮಿಸುತ್ತಿದ್ದು, ಅದು 2026ರ ಹೊತ್ತಿಗೆ ಮುಕ್ತಾಯವಾಗಿ, ಈ ಹೊಸ ರಸ್ತೆ ಸಾರ್ವಜನಿಕರ ಸೇವೆಗೆ ಸಿಗಲಿದೆ.
ಆದರೆ ಇದೀಗ ಏನೂ ಮಾಡದ ನಂದಿ ಹೈವೇ ಡೆವೆಲಪರ್ಸ್ ಲಿಮಿಟೆಡ್ಗೆ ವಸೂಲಿ ಮಾಡಲು ಮುಂದುವರೆಸಿರೋದೆ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನಗಳು ಓಡಾಡದ ಹಿನ್ನೆಲೆಯಲ್ಲಿ ಆದಾಯ ಕುಸಿದಿದ್ದೇ ಟೋಲ್ ವಸೂಲಿ ಮುಂದುವರೆಸಲು ಕಾರಣ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳುತ್ತಿದೆ.
ಇನ್ನು ಈ ಬಗ್ಗೆ ಕೇಂದ್ರ ಸಚಿವ ಹಾಗೂ ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಅವರನ್ನು ಕೇಳಿದರೆ, "ಅವರು ಕೂಡ ಇದೇ ಕಾರಣ ಹೇಳುತ್ತಾರೆ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ದೆಹಲಿಗೆ ಹೋಗಿ ಸಂಬಂಧಿಸಿದ ಅಧಿಕಾರಿಗಳಿಂದ ಫೈಲ್ ತರಿಸಿ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.
ಇದನ್ನೂ ಓದಿ:ಕೇಂದ್ರ ರಸ್ತೆ ನಿಧಿ ಕಾಯ್ದೆ ಉಲ್ಲಂಘಿಸಿ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಆರೋಪ: ಜುಲೈ 18ಕ್ಕೆ ಅರ್ಜಿ ವಿಚಾರಣೆ - High Court