ಗಂಗಾವತಿ(ಕೊಪ್ಪಳ):ಕೇಂದ್ರ ಸರ್ಕಾರ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ತಾಲ್ಲೂಕಿನ ಹಿರೇಬೆಣಕಲ್ ಬೆಟ್ಟದ ಪ್ರದೇಶದ ಮೀಸಲು ಅರಣ್ಯ ಪ್ರದೇಶದಲ್ಲಿ ಗುರುತಿಸಿದ ಜಾಗ ವಿವಾದ ಸೃಷ್ಟಿಸಿದ್ದು, ಸುತ್ತಲಿನ ಹತ್ತಾರು ಗ್ರಾಮಗಳ ಜನರ ವಿರೋಧಕ್ಕೆ ಕಾರಣವಾಗಿದೆ.
ಉದ್ದೇಶಿತ ಅಣುಸ್ಥಾವರ ನಿರ್ಮಾಣ ಪ್ರದೇಶ ವ್ಯಾಪ್ತಿಯಲ್ಲಿರುವ ಹಿರೇಬೆಣಕಲ್, ಚಿಕ್ಕಬೆಣಕಲ್, ಹೊಸ ಹಿರೇಬೆಣಕಲ್, ಲಿಂಗದಳ್ಳಿ, ಹೇಮಗುಡ್ಡ, ಎಚ್.ಜಿ.ರಾಮುಲು ನಗರ, ಮುಕುಂಪಿ, ಎಡಹಳ್ಳಿ, ಹಳೇಕುಮಟಾ, ಜಬ್ಬಲಗುಡ್ಡದಲ್ಲಿ ಸಭೆಗಳನ್ನು ನಡೆಸಲಾಗಿದೆ.
ಅಣುವಿದ್ಯುತ್ ಸ್ಥಾವರ ವಿರೋಧಿಸಿ ಸರಣಿ ಸಭೆ ನಡೆಸಿದ ಗ್ರಾಮಸ್ಥರು (ETV Bharat) ಅಣುವಿದ್ಯುತ್ ಸ್ಥಾವರದ ಘಟಕ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳದ ವ್ಯಾಪ್ತಿಗೆ ಬರುವ ಹಲವು ಗ್ರಾಮಗಳಲ್ಲಿ ಜನರು ಬುಧವಾರ ಸಾಮೂಹಿಕವಾಗಿ ಸೇರಿ ಸಭೆಗಳನ್ನು ನಡೆಸುವ ಮೂಲಕ ಘಟಕ ಸ್ಥಾಪನೆಯನ್ನು ವಿರೋಧಿಸುವ ನಿರ್ಣಯ ಕೈಗೊಂಡರು.
ಅಣುಸ್ಥಾವರ ನಿರ್ಮಾಣದಿಂದ ಹೊರಬರುವ ವಿಕಿರಣದಿಂದ ಜೈವಿಕ ಅಸಮತೋಲನ ಉಂಟಾಗುತ್ತದೆ. ಕ್ಯಾನ್ಸರ್ನಂತಹ ಕಾಯಿಲೆಗೂ ಕಾರಣವಾಗುತ್ತದೆ. ಒಟ್ಟಾರೆ ಕೃಷಿ, ನೀರು, ಪ್ರಾಣಿ, ಪಕ್ಷಿ ಸಂಕುಲದ ಮೇಲೆ ಪರಿಣಾಮ ಬೀರುತ್ತದೆ. ಸುತ್ತಲಿನ 10ರಿಂದ 20 ಕಿಲೋ ಮೀಟರ್ ಪ್ರದೇಶ ತೊಂದರೆಗೀಡಾಗುತ್ತದೆ ಎಂದು ಸಭೆಯಲ್ಲಿ ಪಾಲ್ಗೊಂಡವರು ಆತಂಕ ವ್ಯಕ್ತಪಡಿಸಿದರು.
ಅಣುವಿದ್ಯುತ್ ಸ್ಥಾವರ ವಿರೋಧಿಸಿ ಸರಣಿ ಸಭೆ ನಡೆಸಿದ ಗ್ರಾಮಸ್ಥರು (ETV Bharat) ಗ್ರಾಮದಲ್ಲಿ ಅಣು ವಿದ್ಯುತ್ ಘಟಕ ಸ್ಥಾಪನೆ ಇನ್ನೂ ಖಚಿತವಾಗಿಲ್ಲ. ಆದರೆ, ಗಂಗಾವತಿ ತಹಶೀಲ್ದಾರ್ ಮೂಲಕ ಬೆಣಕಲ್ನಲ್ಲಿ ಲಭ್ಯವಿರುವ ಭೂಮಿಯ ಮಾಹಿತಿ, ನಕಾಶೆಸಮೇತ ಹಲವು ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ, ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಆ ಬಳಿಕವಷ್ಟೇ ಯೋಜನೆ ನಿರ್ಧಾರವಾಗುತ್ತದೆ. ಆದರೆ, ಈಗಿನಿಂದಲೇ ಗ್ರಾಮೀಣ ಮಟ್ಟದಲ್ಲಿ ಸಾಮೂಹಿಕವಾಗಿ ಪ್ರಬಲ ವಿರೋಧ ವ್ಯಕ್ತಪಡಿಸಿದರೆ ಯೋಜನೆಯನ್ನು ಸ್ಥಳಾಂತರಿಸಲು ಅವಕಾಶ ಸಿಗುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.
ಇದಕ್ಕಾಗಿ ಪ್ರತೀ ಗ್ರಾಮದಿಂದ ಆಯಾ ಗ್ರಾಮದ ಪ್ರಮುಖರ ನೇತೃತ್ವದಲ್ಲಿ ಮೊದಲ ಹಂತದಲ್ಲಿ ಗಂಗಾವತಿ ಕ್ಷೇತ್ರದ ಹಾಲಿ-ಮಾಜಿ ಚುನಾಯಿತರನ್ನು ಭೇಟಿಯಾಗುವುದು, ಬಳಿಕ ಜಿಲ್ಲೆಯ ಸಚಿವ, ಸಂಸದರನ್ನು ಭೇಟಿಯಾಗಿ ಹೋರಾಟದ ರೂಪುರೇಷೆಗಳನ್ನು ತಯಾರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.
ಅಣುವಿದ್ಯುತ್ ಸ್ಥಾವರ ವಿರೋಧಿಸಿ ಸರಣಿ ಸಭೆ ನಡೆಸಿದ ಗ್ರಾಮಸ್ಥರು (ETV Bharat) ಇದನ್ನೂ ಓದಿ: ಬೆಣಕಲ್ ಶಿಲಾಸಮಾಧಿಗೆ ಈಗ ವಿಶ್ವ ಪಾರಂಪರಿಕ ತಾಣದಲ್ಲಿ ಸ್ಥಾನಮಾನ! - world heritage site