ಕೊಪ್ಪಳ:ಬಲ್ಡೋಟಾ ಕಾರ್ಖಾನೆ ಸ್ಥಾಪನೆಯನ್ನು ವಿರೋಧಿಸಿ ಪರಿಸರ ಹಿತರಕ್ಷಣಾ ವೇದಿಕೆ, ಜಿಲ್ಲಾ ಬಚಾವೋ ಆಂದೋಲನ ಸಮಿತಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಸೋಮವಾರ ಕೊಪ್ಪಳ ಬಂದ್ ಕರೆ ನೀಡಿದ್ದವು. ಬಂದ್ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಭೆಯಲ್ಲಿ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭಾವುಕರಾದರು.
ಗವಿಮಠದ ಆವರಣದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ, ನಗರದ ಗಡಿಯಾರ ಕಂಬ ಮತ್ತು ಅಶೋಕ ವೃತ್ತದ ಮಾರ್ಗವಾಗಿ ಕೊಪ್ಪಳ ತಾಲೂಕು ಕ್ರೀಡಾಂಗಣದವರೆಗೂ ಸಾಗಿತು. ನಗರದ ನಿವಾಸಿಗಳು, ಕೊಪ್ಪಳ ಸುತ್ತಮುತ್ತಲಿನ ಗ್ರಾಮಗಳ ರೈತರು, ರೈತ ಮಹಿಳೆಯರು, ವಿವಿಧ ಧರ್ಮಗುರುಗಳು ಸೇರಿದಂತೆ ನೂರಾರು ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆ ವಿರೋಧಿಸಿ ಬಂದ್ (ETV Bharat) ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳು ಬಂದ್:ವಿವಿಧ ಸಂಘಟನೆಗಳು ನೀಡಿರುವ ಬಂದ್ ಕರೆಗೆ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಬಾಗಿಲು ಹಾಕಿ, ಬೆಂಬಲ ವ್ಯಕ್ತಪಡಿಸಿದ್ದರು. ಬೆಳಗ್ಗೆ 6 ಗಂಟೆಯಿಂದಲೇ ಎಲ್ಲಾ ವ್ಯಾಪಾರ ವಹಿವಾಟುಗಳು ಬಂದಾಗಿತ್ತು. ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಿತ್ತು. ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಜನರಿಗೆ ತಂಪು ಪಾನೀಯ ಹಾಗೂ ಮಜ್ಜಿಗೆ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, "ಕಾರ್ಖಾನೆ ಓಡಿಸಿ, ಮನುಷ್ಯನನ್ನು ಉಳಿಸಿ ಎಂಬ ಘೋಷಣೆಯೊಂದಿಗೆ ಮಾತು ಆರಂಭಿಸಿ, ಕಾರ್ಖಾನೆಗಳು ಬಂದರೆ ಉದ್ಯೋಗ ಸಿಗುತ್ತೆ ಎನ್ನುತ್ತಾರೆ. ಯಾವ ಪ್ರದೇಶಕ್ಕೆ ಎಷ್ಟು ಕಾರ್ಖಾನೆ ಬೇಕು ಎನ್ನುವುದು ಮುಖ್ಯ. ಸದ್ಯ ಕೊಪ್ಪಳದಲ್ಲಿಯೇ 20ರಿಂದ 30 ಧೂಳು, ಹೊಗೆ ಉಗುಳು ಕಾರ್ಖಾನೆಗಳಿವೆ. ಜನ ಇವುಗಳನ್ನೆಲ್ಲ ಹೇಗೆ ಸಹಿಸಕೊಳ್ಳಬೇಕು. ಇಷ್ಟಾದರೂ ಅರಸನಕೇರಿ ಕಡೆ ಅಣುಸ್ಥಾವರ ಬರುತ್ತೆ ಎನ್ನುತ್ತಿದ್ದಾರೆ. ಎಲ್ಲಾ ಕಡೆ ಕೃಷಿ ಭೂಮಿ ಹೋದರೆ ರೈತರನ್ನು ಎಲ್ಲಿಗೆ ಕಳುಹಿಸುತ್ತೀರಿ, ಉತ್ತರ ಕೊಡಿ?. ಶಾಲೆಗೆ ಹೋದ ಮಗುವಿಗೆ ಮುಖದ ತುಂಬ ಕಾಡಿಗೆ ಬಳಿಯುತ್ತಿರುವ ಕಾರ್ಖಾನೆಗಳನ್ನು ಸ್ಥಾಪಿಸಿ ಅವರ ಭವಿಷ್ಯ ರೂಪಿಸುವುದು ಹೇಗೆ?. ಮತ್ತೆ ಕಾರ್ಖಾನೆಗಳು ಬಂದರೆ ನರಕಕ್ಕಿಂತ ಕಡೆಯಾಗುತ್ತೆ ಜೀವನ" ಎಂದು ಎಚ್ಚರಿಸಿದರು.
ಉಕ್ಕು ಕಾರ್ಖಾನೆ ಸ್ಥಾಪನೆ ವಿರೋಧಿಸಿ ಬಂದ್ (ETV Bharat) ವೇದಿಕೆಯಲ್ಲಿ ಭಾವುಕರಾದ ಗವಿಶ್ರೀ: ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ಸಭೆಯಲ್ಲಿ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಈಗಾಗಲೇ ಇರುವ ಅನೇಕ ಸ್ಟೀಲ್ ಫ್ಯಾಕ್ಟರಿಗಳಿಂದ ಸುತ್ತಮುತ್ತಲಿನ ಜನರ ಮೇಲೆ ಆಗುತ್ತಿರುವ ದುಷ್ಪರಿಣಾಮ ಬಗ್ಗೆ ವಿಡಿಯೋ ಪ್ರದರ್ಶನ ಮಾಡಲಾಯಿತು. ಧೂಳು ಮತ್ತು ಹೊಗೆಯಿಂದ ಜನರು ಸಂಕಷ್ಟ ಪಡುತ್ತಿರುವ ದೃಶ್ಯಗಳನ್ನು ನೋಡುತ್ತಲೇ ಸ್ವಾಮೀಜಿ ಭಾವುಕರಾದರು.
ಇದನ್ನೂ ಓದಿ:ಅಂಕೋಲಾದ ಕೇಣಿಯಲ್ಲಿ ನಿಷೇಧಾಜ್ಞೆ ಜಾರಿ : ಆದೇಶ ಲೆಕ್ಕಿಸದೇ ಕಡಲತೀರದಲ್ಲಿ ಸೇರಿದ ಜನ