ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಸ್ಥಳೀಯರಾದ ಕಿರಣ್ ಬಾಂದೇಕರ್ ಮಾತನಾಡಿದರು (ETV Bharat) ಬೆಳಗಾವಿ : ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಗಡಿನಾಡು ಬೆಳಗಾವಿಯಲ್ಲೂ ಜನ ಅಸಮಾಧಾನ ವ್ಯಕ್ತಪಡಿಸಿದ್ದು, ನಿಮ್ಮ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ನಮಗೇಕೆ ಬೆಲೆ ಏರಿಕೆಯ ಬರೆ ಹಾಕುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದರೆ ಅದು ಎಲ್ಲದರ ಮೇಲೂ ನೇರ ಪರಿಣಾಮ ಬೀರುತ್ತದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತದೆ. ಇದರಿಂದ ಬಡ, ಮಧ್ಯಮ ವರ್ಗದ ಜನ ಜೀವನ ನಡೆಸುವುದು ದುಸ್ತರವಾಗುತ್ತದೆ. ಬೆಳಗಾವಿಯಲ್ಲಿ ಈ ಮೊದಲು 1 ಲೀಟರ್ ಪೆಟ್ರೋಲ್ ದರ 99 ರೂ. 68 ಪೈಸೆ ಇತ್ತು. ಈಗ 102 ರೂ. 70 ಪೈಸೆ ಆಗಿದೆ. 3 ರೂ. 2 ಪೈಸೆ ದರ ಹೆಚ್ಚಾಗಿದೆ. ಇನ್ನು 1 ಲೀಟರ್ ಡೀಸೆಲ್ ಬೆಲೆ 85 ರೂ. 82 ಪೈಸೆ ಇತ್ತು. ಆದರೆ, ಈಗ 88 ರೂ. 83 ಪೈಸೆ ಆಗಿದೆ.
ಈ ಬಗ್ಗೆ ಕಿರಣ ಬಾಂದೇಕರ್ ಎನ್ನುವವರು ಈಟಿವಿ ಭಾರತದೊಂದಿಗೆ ಮಾತನಾಡಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಿರ್ಧಾರವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಇಂಧನ ಬೆಲೆ ಏರಿಕೆ ಎಲ್ಲ ಕ್ಷೇತ್ರಗಳ ಮೇಲೂ ದೊಡ್ಡ ಪರಿಣಾಮ ಬೀರಿ, ಜನಸಾಮಾನ್ಯರಿಗೆ ಬಹಳಷ್ಟು ಸಮಸ್ಯೆ ಉಂಟಾಗುತ್ತದೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ಬೆಲೆ ಏರಿಕೆ ನಿಯಂತ್ರಿಸುತ್ತೇವೆಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಈಗ ಕೊಟ್ಟ ಮಾತು ಮರೆಯುತ್ತಿರುವುದು ಸರಿಯಲ್ಲ. ಅದೇ ರೀತಿ ಗ್ಯಾರಂಟಿ ಯೋಜನೆಗಳಿಗೂ ಇದಕ್ಕೂ ಸಂಬಂಧ ಇಲ್ಲ. ನೀವು ಭರವಸೆ ಕೊಟ್ಟಂತೆ ಗ್ಯಾರಂಟಿ ಕೊಡುತ್ತಿದ್ದೀರಿ. ಹಾಗಂತ, ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಅಭಿಲಾಷ ಎಂಬುವರು ಮಾತನಾಡಿ, ಇಂಧನ ಬೆಲೆ ಹೆಚ್ಚಿಸಿದ್ದರಿಂದ ನಮಗೆಲ್ಲ ಸಾಕಷ್ಟು ಆರ್ಥಿಕ ಸಮಸ್ಯೆ ಉಂಟಾಗಲಿದೆ. ಇನ್ನು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಉಚಿತ ಭಾಗ್ಯಗಳನ್ನು ಕೊಡುವುದನ್ನು ಕಡಿಮೆ ಮಾಡಬೇಕು. ಇಂಥ ಯೋಜನೆಗಳನ್ನು ಕೈಬಿಟ್ಟು ಯುವಕರಿಗೆ ಉದ್ಯೋಗ ನೀಡುವುದು, ಇನ್ನಿತರ ಅಭಿವೃದ್ಧಿ ಕಡೆಗೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ :ಇಂಧನ ಬೆಲೆ ಏರಿಕೆ ಖಂಡಿಸಿ ಎತ್ತುಗಳಿಗೆ ಸ್ಕೂಟಿ ಕಟ್ಟಿ ವಿಭಿನ್ನ ಪ್ರತಿಭಟನೆ: ಬೆಳಗಾವಿಯಲ್ಲಿ ಕಾಂಗ್ರೆಸ್ ವಿರುದ್ಧ ಬೀದಿಗಿಳಿದ ಬಿಜೆಪಿ - BJP Protest Against Congress