ರಾಯಚೂರು: ರಾಜ್ಯದಲ್ಲಿ ಆವರಿಸಿರುವ ಬರಗಾಲದಿಂದಾಗಿ ರೈತಾಪಿ ವರ್ಗ ಕಂಗಾಲಾಗಿದೆ. ಇದೀಗ ಬೇಸಿಗೆಯಲ್ಲಿ 0.5ರಿಂದ 1 ಡಿಗ್ರಿ ಸೆಲಿಯಸ್ ಉಷ್ಣಾಂಶ ಕೂಡಾ ಹೆಚ್ಚಾಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬರುವ ರಾಯಚೂರಿನ ಜನರು ಹೈರಾಣಾಗುತ್ತಿದ್ದಾರೆ.
ರಾಯಚೂರು ಕೃಷಿ ವಿವಿಯ ಹವಾಮಾನ ಇಲಾಖೆ ತಾಂತ್ರಿಕ ಸಹಾಯಕರಾದ ಡಾ.ಶಾಂತಪ್ಪ ಮಾತನಾಡಿ, ''ಕಳೆದ 30 ವರ್ಷಗಳ ಮಾರ್ಚ್ ತಿಂಗಳ ಉಷ್ಣಾಂಶ ಗಮನಿಸಿದಾಗ ಸರಾಸರಿ 37.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಪ್ರಸಕ್ತ ಮಾರ್ಚ್ ತಿಂಗಳಲ್ಲಿ ಸುಮಾರು 37.8 ಉಷ್ಣಾಂಶ ದಾಖಲಾಗಿದ್ದು, 0.4 ರಿಂದ 0.5 ಹೆಚ್ಚಳವಾಗಿದೆ. ಅಲ್ಲದೇ ಮಾರ್ಚ್ ತಿಂಗಳಲ್ಲಿ 40.6 ಗರಿಷ್ಠ ತಾಪಮಾನ ದಾಖಲಾಗುವ ಮೂಲಕ ಬೇಸಿಗೆ ಆರಂಭದ ದಿನಗಳಲ್ಲಿ ಬಿಸಿಲಿನ ಶಾಕ್ ಅನ್ನು ಜನ ಅನುಭವಿಸುವಂತೆ ಮಾಡಿದೆ'' ಎಂದರು.
''ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯೊಂದರಲ್ಲಿಯೇ ಮುಂಗಾರು ಮತ್ತು ಹಿಂಗಾರಿಗೆ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಈ ಭೀಕರ ಬರದ ನೇರ ಪರಿಣಾಮವಾಗಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅತೀಹೆಚ್ಚು 40.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬಿಸಿಲಿನ ಪ್ರಖರತೆ ಏಪ್ರಿಲ್-ಮೇ ತಿಂಗಳಲ್ಲೂ ಸಹ ಮುಂದುವರೆದಿದೆ. ಏಪ್ರಿಲ್ ತಿಂಗಳಲ್ಲಿ ಸರಾಸರಿ 39.8 ಹಾಗೂ ಮೇ ತಿಂಗಳಲ್ಲಿ ಸರಾಸರಿ 40.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ಆದ್ರೆ ಪ್ರಸಕ್ತ ಏಪ್ರಿಲ್ ತಿಂಗಳಲ್ಲಿ ಮುನ್ಸೂಚನೆಯಂತೆ 0.5ನಿಂದ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಕಂಡುಬರುತ್ತಿದೆ'' ಎಂದು ಡಾ.ಶಾಂತಪ್ಪ ತಿಳಿಸಿದ್ದಾರೆ.