ಬೆಂಗಳೂರು: ವಸತಿ ಯೋಜನೆಗಳಿಗೆ ನಿಗದಿತ ಮೊತ್ತ ಪಾವತಿಸಿದ ಬಳಿಕವೂ ಸೌಲಭ್ಯ ಪಡೆಯುವುದಕ್ಕಾಗಿ ಸೇವೆಯಿಂದ ನಿವೃತ್ತರಾಗಿರುವವರನ್ನು ಮತ್ತು ಹಿರಿಯ ನಾಗರಿಕರನ್ನು ಪದೇ ಪದೇ ತಿರುಗಾಡುವಂತೆ ಮಾಡಿ ಆಯಾಸಗೊಳ್ಳುವಂತೆ ಮಾಡಬಾರದು ಎಂಬ ಅಂಶ ಡೆವಲ್ಪರ್‌ಗಳು ನೆನಪಿಟ್ಟುಕೊಂಡಿರಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಂಗಳೂರಿನ ಮೆಸರ್ಸ್ ಓಝೋನ್ ಅರ್ಬನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಪ್ರಸ್ತುತ ಪ್ರಕರಣದಲ್ಲಿ ಫ್ಲಾಟ್ ಖರೀದಿಗಾಗಿ ಹಿರಿಯ ನಾಗರಿಕರು ಜೀವನ ಪೂರ್ತಿ ದುಡಿದು ಉಳಿತಾಯ ಮಾಡಿರುವ ಮೊತ್ತವನ್ನು ಪಾವತಿ ಮಾಡಿರುತ್ತಾರೆ. ಅಂತಹ ಜನ ನಿಗದಿತ ಮೊತ್ತವನ್ನು ಪಾವತಿ ಮಾಡಿದ ಮೂಲಕವೂ ಕಾಮಗಾರಿ ಪೂರ್ಣಗೊಳಿಸದೆ ಸ್ವಾಧೀನಾನುಭವ ಪತ್ರ ನೀಡಲಾಗಿದೆ. ಇದರಿಂದ ಹಿರಿಯ ನಾಗರಿಕರೂ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ನಿವೃತ್ತರು ಆಯಾಸಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ಪೀಠ ಡೆವಲ್ಪರ್‌ಗಳಿಗೆ ಕಿವಿ ಮಾತು ಹೇಳಿದೆ.
ಅಲ್ಲದೆ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರ ಸಂಸ್ಥೆಗೆ ಸ್ಥಳೀಯ ಗ್ರಾಮ ಪಂಚಾಯತ್ ಯೋಜನೆ ಪೂರ್ಣಗೊಂಡಿದೆ ಎಂಬುದಾಗಿ ನೀಡಿರುವ ಪ್ರಮಾಣ ಪತ್ರ ಕಾನೂನು ಬಾಹಿರವಾಗಿದೆ. ಯೋಜನೆಗಾಗಿ ಗ್ರಾಮ ಪಂಚಾಯಿತಿಗೆ ಸಲ್ಲಿಸಲಾದ ಯೋಜನೆ ಪೂರ್ಣಗೊಳಿಸಿದ ಪ್ರಮಾಣ ಪತ್ರದಲ್ಲಿ ಮಾಲೀಕರ ಹೆಸರು ಮತ್ತು ಸಹಿ ಇಲ್ಲ. ಎಲ್ಲ ಅಂಶಗಳು ಖಾಲಿ ಇದೆ. ಆದರೂ, ಗ್ರಾಮ ಪಂಚಾಯಿತಿ ಅದಕ್ಕೆ ಅನುಮೋದನೆ ನೀಡಿದೆ. ಇದು ಹೇಗೆ ನಡೆಯಿತು ಎಂಬುದೇ ಆಘಾತಕಾರಿಯಾಗಿದೆ ಎಂದು ಪೀಠ ತಿಳಿಸಿದೆ.
ಜೊತೆಗೆ, ಗ್ರಾಮ ಪಂಚಾಯತ್‌ಗೆ ಸಲ್ಲಿಸಿದ ಮನವಿಯಲ್ಲಿನ ವಿವರಗಳು ಪ್ರಾರಂಭ ಪ್ರಮಾಣ ಪತ್ರವನ್ನು ಕೋರುವುದಕ್ಕೆ ಅಗತ್ಯವಿರುವ ಮಾಹಿತಿ ಮಾತ್ರ ಇದೆ. ಆದರೆ, ಸ್ವಾಧೀನ ಪ್ರಮಾಣ ಪತ್ರಕ್ಕೆ ಅಲ್ಲ. ಆದರೆ, ಗ್ರಾಮ ಪಂಚಾಯತ್ ಅಧಿಕಾರಿಗಳು ಕಾಯ್ದೆಯಲ್ಲಿ ತಿಳಿಸಿರುವ ಅವಶ್ಯಕತೆಗಳನ್ನು ಪರಿಶೀಲಿಸದೆ ಮತ್ತು ನೈರ್ಮಲ್ಯ, ವಿದ್ಯುತ್ ಸರಬರಾಜು ಕೆಲಸಗಳನ್ನು ಪೂರ್ಣಗೊಂಡಿರುವ ಕುರಿತು ಪರಿಶೀಲನೆಗೊಳಪಡಿಸದೆ ಸ್ವಾಧೀನ ಪ್ರಮಾಣಪತ್ರ ನೀಡಿದ್ದಾರೆ ಎಂದು ಪೀಠ ತಿಳಿಸಿದೆ.
ಇದನ್ನೂ ಓದಿ: ಕಾನೂನುಬಾಹಿರವಾಗಿ ಮನೆ ತೆರವು: ₹ 15 ಲಕ್ಷ ಪರಿಹಾರ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಬೆಸ್ಕಾಂ ವಿದ್ಯುತ್ ಸರಬರಾಜು ಆಗಸ್ಟ್ 21, 2018 ರಂದು ಪಡೆಯಲಾಗುತ್ತದೆ. ವಿದ್ಯುತ್ ಸಹ ಇಲ್ಲದ ಅಪಾರ್ಟ್ಮೆಂಟ್ ಸಂಕೀರ್ಣಕ್ಕೆ ಗ್ರಾಮ ಪಂಚಾಯತ್ ಸ್ವಾಧೀನ ಪ್ರಮಾಣ ಪತ್ರವನ್ನು ನೀಡುತ್ತದೆ ಇದು ಅಚ್ಚರಿಗೆ ಕಾರಣವಾಗಿದೆ. ಮನೆ ಖರೀದಿದಾರರನ್ನು ಆಕರ್ಷಿಸುವ ಭರವಸೆ ನೀಡಿದ್ದರೂ, ಯಾವುದೇ ಸೌಲಭ್ಯಗಳು ಲಭ್ಯವಾಗಿಲ್ಲ. ಒಳಚರಂಡಿ ಸಂಸ್ಕರಣಾ ಘಟಕ ಇನ್ನೂ ಪ್ರಾರಂಭಿಸಬೇಕಾಗಿದೆ. ಈ ಪ್ರಕ್ರಿಯಿಯಲ್ಲಿ ಸ್ವಾಧೀನ ಪ್ರಮಾಣ ಪತ್ರವನ್ನು ಪಡೆಯುವಲ್ಲಿ ಅರ್ಜಿದಾರರು ಗ್ರಾಮ ಪಂಚಾಯತ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ವಂಚಿಸಿದ್ದಾರೆ. ಅಂತಹ ವಂಚನೆಯನ್ನು ಅಧಿಕಾರಿಗಳು ಡೆವಲಪರ್‌ಗಳು ಕೈಜೋಡಿಸಿ ನಡೆಸಿದ್ದಾರೆ. ಆದ್ದರಿಂದ ಈ ರೀತಿಯ ಯೋಜನೆಗಳಿಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ಕಾಯ್ದೆಯಲ್ಲಿನ ನಿಯಮಗಳನ್ನು ಕಡ್ಡಾಯ ಜಾರಿ ಮಾಡುವಂತೆ ನ್ಯಾಯಪೀಠ ಇದೇ ವೇಳೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಮತ್ತು ಪೂಜನಹಳ್ಳಿ ಗ್ರಾಮಗಳಲ್ಲಿ 6.05 ಎಕರೆ ಭೂಮಿಯಲ್ಲಿ ನಿವೃತ್ತರಾದವರಿಗಾಗಿಯೇ "ಸೆರೆನ್ ಅರ್ಬನಾ" ಅಪಾರ್ಟ್ಮೆಂಟ್ ನಿರ್ಮಾಣ ಮಾಡಿತ್ತು. ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸೆರೆನ್ ಅರ್ಬನಾ ಅಪಾರ್ಟ್ಮೆಂಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಫ್ಲಾಟ್ ಖರೀದಿಸಿದ್ದರು. ಈ ಯೋಜನೆಯು 2017 ರಲ್ಲಿ ಪೂರ್ಣಗೊಳ್ಳಬೇಕಿತ್ತು ಮತ್ತು ಅದೇ ವರ್ಷದಲ್ಲಿ ಕನ್ನಮಂಗಲ ಗ್ರಾಮ ಪಂಚಾಯತ್ ಸ್ವಾಧೀನಾನುಭವ ಪ್ರಮಾಣಪತ್ರಗಳನ್ನು (ಒಸಿ) ನೀಡಿತು. ಇದರ ಜೊತೆಗೆ, ಯೋಜನೆ ಅಪೂರ್ಣವಾಗಿದ್ದರೂ, 241 ಹಂಚಿಕೆದಾರರಿಗೆ ಮಾರಾಟ ಪತ್ರಗಳನ್ನು ಸಹ ವಿತರಣೆ ಮಾಡಲಾಗಿತ್ತು.
ಈ ಅಪಾರ್ಟ್ಮೆಂಟ್ನಲ್ಲಿ ಒಪ್ಪಂದಂತೆ ಎಲ್ಲ ಕಾಮಗಾರಿಗಳು ಮತ್ತು ಸೌಲಭ್ಯಗಳು ಪೂರ್ಣಗೊಳಿಸದೆ ಫ್ಲಾಟ್ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಸೆರೆನ್ ಅರ್ಬನಾ ಅಪಾರ್ಟ್ಮೆಂಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘವು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ(ರೇರಾ) ದೂರು ನೀಡಿತ್ತು. ಅಲ್ಲದೆ, ಈ ಯೋಜನೆ ಪ್ರಗತಿಯಲ್ಲಿರುವ ಯೋಜನೆ ಎಂದು ಘೋಷಿಸಲು ನಿರ್ದೇಶನ ನೀಡುವಂತೆ ಕೋರಿತು. ಇದಕ್ಕೆ ಸಂಬಂಧಿಸಿದಂತೆ ಮೆಸರ್ಸ್ ಓಝೋನ್ ಅರ್ಬನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್, ಈ ಯೋಜನೆ ರೇರಾ ಕಾಯ್ದೆಯಡಿ ರೂಪಿಸಲಾದ ನಿಯಮಗಳ ಅಡಿಯಲ್ಲಿ ಹೊರಗಿಡಲಾಗಿದೆ ಎಂದು ತಿಳಿಸಿದ್ದರು. ಆದರೆ, ರೇರಾ ಇದೊಂದು ಪ್ರಗತಿಯಲ್ಲಿರುವ ಯೋಜನೆ ಎಂದು ಘೋಷಣೆ ಮಾಡಿ ಆದೇಶಿಸಿತ್ತು.
ಇದನ್ನೂ ಓದಿ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್ ನೇಮಕ