ಧಾರವಾಡ:ಹುಬ್ಬಳ್ಳಿಯ ಭಾಗ್ಯ ನಗರದಲ್ಲಿ ಪ್ಲಾಟ್ ಕೊಡದ ಎಸ್.ಬಿ. ಪ್ರಾಪರ್ಟಿಸ್ಗೆ ದಂಡ ಮತ್ತು ಪರಿಹಾರ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಹುಬ್ಬಳ್ಳಿಯ ಕೇಶ್ವಾಪುರ ನಗರದ ನಿವಾಸಿ ನಾಗರಾಜ ಮಾಲಗತ್ತಿ ಎಂಬುವವರು ರೈಲ್ವೆ ಉದ್ಯೋಗಿಯಾಗಿದ್ದರು. ಅವರು ಸ್ವಂತ ಮನೆ ಕಟ್ಟಿಕೊಳ್ಳುವ ಇಚ್ಛೆಯಿಂದ ಹುಬ್ಬಳ್ಳಿಯ ವಿಜಯಕುಮಾರ ಅಯ್ಯಾವರಿ ಇವರ ಎಸ್.ಬಿ. ಪ್ರಾಪರ್ಟಿಸ್ ಅವರ ಜೊತೆ ಪ್ಲಾಟ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಹುಬ್ಬಳ್ಳಿಯ ಭಾಗ್ಯ ನಗರ ಲೇಔಟ್ನಲ್ಲಿ ಪ್ಲಾಟ್ ನಂ.23ನ್ನು 2022ರಲ್ಲಿ ಒಟ್ಟು ರೂ.12,31,720 ಪೈಕಿ ರೂ.6,15,000 ಮುಂಗಡ ಹಣವಾಗಿ ಪಾವತಿಸಿ ದೂರುದಾರ ಎದುರುದಾರ ಜೊತೆ ಖರೀದಿ ಕರಾರು ಮಾಡಿಕೊಂಡಿದ್ದರು. ನಂತರ ಎದುರುದಾರರು ಆ ಪ್ಲಾಟ್ ಅಭಿವೃದ್ಧಿ ಪಡಿಸದೇ ಒಂದಿಲ್ಲೊಂದು ನೆಪ ಹೇಳಿ ಮುಂದುಡುತ್ತಾ ಬಂದರು. ದೂರುದಾರರು ಸಾಕಷ್ಟು ಸಲ ವಿನಂತಿಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ದೂರುದಾರರ ಅಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ, ಬಿಲ್ಡರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2024ರ ಫೆಬ್ರವರಿ 28ರಂದು ಈ ದೂರನ್ನು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರನಿಂದ ರೂ.6,15,000 ಹಣ ಪಡೆದುಕೊಂಡು ಎದುರುದಾರ ಅವರಿಗೆ ಪ್ಲಾಟ್ ಖರೀದಿ ಪತ್ರ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣವನ್ನು ಹಿಂತಿರುಗಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.