ಬೆಂಗಳೂರು:ಸಿಬ್ಬಂದಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಆತನ ಈ ಹಿಂದಿನ ನಡವಳಿಕೆಯನ್ನೂ ಸಹ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಯಾಣಿಕರಿಗೆ ಟಿಕೆಟ್ ನೀಡದ ಆರೋಪ ಎದುರಿಸುತ್ತಿದ್ದ ಬಸ್ ನಿರ್ವಾಹಕರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ಕೆಎಸ್‌ಆರ್‌ಟಿಸಿಯ ಕ್ರಮವನ್ನು ಎತ್ತಿ ಹಿಡಿದಿದೆ.
ನಿರ್ವಾಹಕ ಮಹಾದೇವ ಎಂಬುವರು ಸೇವೆಯಲ್ಲಿ ಮುಂದುವರಿಸುವಂತೆ ಕಾರ್ಮಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಮಹಾದೇವ ಅವರು ಈ ಹಿಂದೆ 122 ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಕೆಎಸ್‌ಆರ್‌ಟಿಸಿಯ ಶಿಸ್ತು ಸಮಿತಿ ಇದನ್ನು ಪರಿಗಣಿಸಿ ಸೇವೆಯಿಂದ ವಜಾ ಮಾಡುವಂತೆ ಆದೇಶಿಸಿತ್ತು. ಆದ್ದರಿಂದ ಈ ವಜಾ ಆದೇಶವನ್ನು ಕಾರ್ಮಿಕ ನ್ಯಾಯಾಲಯ ಇಷ್ಟೊಂದು ಹಗುರವಾಗಿ ಪರಿಗಣಿಸಬಾರದಿತ್ತು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಕಾರ್ಮಿಕ ನ್ಯಾಯಾಲಯ ಆತನ ವಜಾ ರದ್ದುಗೊಳಿಸಿ ಸೇವೆಗೆ ಮರು ನಿಯುಕ್ತಿ ಮಾಡಿದ ಬಳಿಕವು ಆತನ ಮೇಲೆ ಟಿಕೆಟ್ ನೀಡದ 10 ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ಗಂಭೀರತೆ ಜೊತೆಗೆ ಸಿಬ್ಬಂದಿ ಪೂರ್ವ ನಡವಳಿಕೆಯನ್ನು ಗಮನಿಸಿ ತೀರ್ಮಾನಿಸುವುದು ಉತ್ತಮ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಟಿಕೆಟ್ ನೀಡುವುದು, ಪ್ರಯಾಣ ದರ ಸಂಗ್ರಹಿಸುವುದು ಮತ್ತು ಅದನ್ನು ಸಂಬಂಧಪಟ್ಟವರಿಗೆ ಜಮೆ ಮಾಡುವುದು ನಿರ್ವಾಹಕನ ಕರ್ತವ್ಯ. ಈ ಕೆಲಸಕ್ಕಾಗಿ ಆತನಿಗೆ ಸಂಬಳ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ನಿರ್ವಾಹಕ ತನ್ನ ಕರ್ತವ್ಯವನ್ನು ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ನಿರ್ವಹಿಸುವಲ್ಲಿ ವಿಫಲನಾಗಿದ್ದಾನೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಎನ್.ಎನ್.ಮಹಾದೇವ ಎಂಬವರು 2013ರ ಜನವರಿ 23ರಂದು ಗೋಣಿಕೊಪ್ಪದಿಂದ ಬಿ.ಶೆಟ್ಟಿಗೇರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು ಮೂವರು ಪ್ರಯಾಣಿಕರಿಗೆ ಟಿಕೆಟ್ ನೀಡದಿರುವುದನ್ನು ತಪಾಸಣಾ ತಂಡ ಪತ್ತೆ ಹಚ್ಚಿತ್ತು. ಈ ಕುರಿತು ಇಲಾಖೆಯ ತನಿಖೆ ನಡೆದು ನಿರ್ವಾಹಕ ಕರ್ತವ್ಯಲೋಪ ಎಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಮೈಸೂರಿನ ಕಾರ್ಮಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಕಾರ್ಮಿಕ ನ್ಯಾಯಾಲಯ ಮಹಾದೇವ ಅವರನ್ನು ವಜಾ ಮಾಡಿದ್ದನ್ನು ರದ್ದುಪಡಿಸಿ ಎರಡು ವೇತನ ಹೆಚ್ಚಳವನ್ನು ಸ್ಥಗಿತಗೊಳಿಸುವಂತೆ 2017ರಲ್ಲಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್ ಮೊರೆ ಹೋಗಿತ್ತು.
ಇದನ್ನೂಓದಿ:ಹೆಚ್ ಡಿ ರೇವಣ್ಣ ಜಾಮೀನು ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಎಸ್ಐಟಿ - HD Revanna Bail cancel plea