ನೆಲಮಂಗಲ(ಬೆಂಗಳೂರು ಗ್ರಾಮಾಂತರ): ಸಾಲು ಸಾಲು ರಜೆಗಳು ಮುಗಿಸಿದ ಜನರು ಇಂದು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನದಿಂದ ಇಂದು ಬೆಳಗ್ಗೆಯವರೆಗೂ ಬೆಂಗಳೂರು ಪ್ರವೇಶಿಸುವ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಂಡುಬಂತು.
ರಾಷ್ಟ್ರೀಯ ಹೆದ್ದಾರಿಯಲ್ಲಿನ ಟ್ರಾಫಿಕ್ ಕಿರಿಕಿರಿಗೆ ಹೈರಾಣಾದ ಜನರು ಮೆಟ್ರೋ ಮೊರೆ ಹೋಗಿದ್ದರು. ಆದರೆ ಪ್ರಯಾಣಿಕರ ದಟ್ಟಣೆಯಿಂದ ಮೆಟ್ರೋ ಸಂಚಾರದಲ್ಲಿಯೂ ಇತ್ತು. ನೆಲಮಂಗಲ ಮಾರ್ಗದಲ್ಲಿ ಬರುವ ಮೊದಲ ನಿಲ್ದಾಣವಾದ ನಾಗಸಂದ್ರದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ ನಿಲ್ದಾಣದ ಹೊರಗೆ ಒಂದು ಕಿ.ಮೀ ಸರದಿ ಸಾಲು ಇತ್ತು. ಮೆಟ್ರೋ ಪ್ರಯಾಣಿಕರ ಉದ್ದನೆಯ ಸಾಲಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾಗಸಂದ್ರ ಮೆಟ್ರೋ ನಿಲ್ದಾಣದ ಹೊರಗೆ ಕ್ಯೂ ನಿಂತ ಪ್ರಯಾಣಿಕರು (ETV Bharat) ರಜೆ ಮುಗಿಸಿ ಬಂದವರಿಗೆ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ:ಹಬ್ಬಕ್ಕೆ ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಜನರು ನಿನ್ನೆ ರಾತ್ರಿಯಿಂದಲೇ ನಗರಕ್ಕೆ ವಾಪಸ್ ಆಗುತ್ತಿರುವ ಹಿನ್ನೆಲೆ ನಗರದ ನಾನಾ ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ವಿವಿಧ ಜಿಲ್ಲೆಗಳಿಂದ ಬೆಂಗಳೂರು ನಗರ ಸಂಪರ್ಕಿಸುವ ತುಮಕೂರು, ಹಳೆ ಮದ್ರಾಸ್ ರಸ್ತೆ, ಹೊಸೂರು ರಸ್ತೆ ಹಾಗೂ ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ವಾಹನ ಸವಾರರು ಪರದಾಡಿದರು.
ದೂರದ ಜಿಲ್ಲೆಗಳಿಂದ ಇಂದು ಬೆಳಗ್ಗೆ ಜನರು ನಗರಕ್ಕೆ ಬಂದಿದ್ದರಿಂದ ವಿಪರೀತ ಸಂಚಾರ ದಟ್ಟಣೆಯಾಗಿತ್ತು. ಸಂಚಾರ ಪೊಲೀಸರು ಸಂಚಾರ ದಟ್ಟಣೆ ನಿವಾರಿಸಲು ಹರಸಾಹಸಪಟ್ಟರು. ಮಂದಗತಿಯಲ್ಲಿ ವಾಹನ ಚಾಲನೆ ಇದ್ದಿದ್ದರಿಂದ ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ಹೋಗುವ ಉದ್ಯೋಗಗಳಿಗೂ ತೊಂದರೆಯಾಯಿತು. ಕೆ.ಆರ್.ಪುರಂನ ಭಟ್ಟರಹಳ್ಳಿ ಬಳಿ ಒಂದು ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಆಗಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.
ಸ್ಕೈ ವಾಕ್ ಮೇಲೆ ಜನದಟ್ಟಣೆ:ದೂರದ ಜಿಲ್ಲೆಗಳಿಂದ ಬಂದ ಜನರು ತಮ್ಮ ತಮ್ಮ ಏರಿಯಾಗಳಿಗೆ ತಲಪಲು ಮೆಟ್ರೊ ಮೊರೆ ಹೋದರು. ಇದರಿಂದ ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರುಮುಖವಾಗಿತ್ತು. ಕೆಂಗೇರಿಯಿಂದ ಮೆಟ್ರೊ ರೈಲು ಹತ್ತುವ ಸಲುವಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂದ ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸ್ಕೈ ವಾಕ್ ಮೇಲೆ ಜನದಟ್ಟಣೆಯಾಗಿತ್ತು. ಅದೇ ರೀತಿ ಯಶವಂತಪುರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಕೆ.ಆರ್.ಪುರಂ, ಕೆಂಗೇರಿ ರೈಲು ನಿಲ್ದಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂದ ವಾಹನ ಸಂಚಾರದಲ್ಲಿ ದಟ್ಟಣೆಯಾಗಿತ್ತು.
ಇದನ್ನೂ ಓದಿ:ಹಬ್ಬದ ರಜೆ ಮುಗಿಸಿಕೊಂಡು ನಗರಗಳತ್ತ ಮುಖ ಮಾಡಿದ ಜನ: ಕಿಕ್ಕಿರಿದ ಗಂಗಾವತಿ ಬಸ್ ನಿಲ್ದಾಣ