ಬೆಂಗಳೂರು:ಪಕ್ಷ ತಾಯಿ ಇದ್ದ ಹಾಗೆ. ಪಕ್ಷವನ್ನು ಹೆದರಿಸಿದರೆ ಸಹಿಸುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಇದೇ ಜನವರಿ 21 ರಂದು ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ "ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್" ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಎಲ್ಲರೂ ಶಿಸ್ತು ಅನುಸರಿಸಬೇಕು. ಯಾರೇ ಆದರೂ ಶಿಸ್ತು ಉಲ್ಲಂಘಿಸುವಂತಿಲ್ಲ. ಪಕ್ಷಕ್ಕೆ ಯಾರೂ ಹೆದರಿಕೆ ಹಾಕಲು ಬಿಡುವುದಿಲ್ಲ. ಪಕ್ಷ ತಾಯಿ ಇದ್ದ ಹಾಗೇ. ಸರ್ಕಾರ ಅದರ ಮಗು ಎಂದು ತಿಳಿಸಿದರು.
ಪ್ರತಿಯೊಬ್ಬರ ಕಾರ್ಯವೈಖರಿ ಗಮನಿಸುತ್ತೇವೆ:ಸಚಿವರ ಕಾರ್ಯವೈಖರಿಗೆ ವರದಿ ಕೊಟ್ಟಿದ್ದಾರೆ. ಮುಂದಿನ ಎರಡು ತಿಂಗಳು ಸಮಯವಿದೆ. ಅಷ್ಟರೊಳಗೆ ಕಾಂಗ್ರೆಸ್ ಕಾರ್ಯಕ್ರಮ ಅನುಷ್ಠಾನವಾಗಬೇಕು. ಸಚಿವರು ನಮ್ಮ ಕಾರ್ಯಕ್ರಮ ಅನುಷ್ಠಾನ ಗೊಳಿಸಬೇಕು. ಮುಂದಿನ ಯೋಚನೆಗಳ ಬಗ್ಗೆ ವಿವರಿಸಬೇಕು. ಸಚಿವರು ಕಡ್ಡಾಯವಾಗಿ ಡಿಸಿಸಿ ಕಚೇರಿಗೆ ಭೇಟಿ ಕೊಡಬೇಕು. ಕಾರ್ಯಕರ್ತರು, ಮುಖಂಡರ ಜೊತೆ ಕೆಲಸ ಮಾಡಬೇಕು. ಪ್ರತಿಯೊಬ್ಬರ ಕಾರ್ಯವೈಖರಿಯನ್ನು ನಾವು 60 ದಿನಗಳ ಕಾಲ ನಾವು ಗಮನಿಸ್ತೇವೆ ಎಂದರು.
ರಾಜ್ಯಾದ್ಯಂತ ಕಾಂಗ್ರೆಸ್ ಭವನ ಸ್ಥಾಪಿಸಿ:ರಾಜ್ಯಾದ್ಯಂತ ಕಾಂಗ್ರೆಸ್ ಭವನ ಸ್ಥಾಪಿಸಿ. 100 ಕಾಂಗ್ರೆಸ್ ಭವನಕ್ಕೆ ರಾಹುಲ್ ಚಾಲನೆ ಕೊಡ್ತಾರೆ. ಕಟ್ಟಡಕ್ಕೆ ಬೇಕಾದ ಭೂಮಿ ಗುರುತಿಸಲಾಗಿದೆ. ಮುಂದಿನ ವರ್ಷದೊಳಗೆ ಪಾರ್ಟಿಯನ್ನು ಬಲಿಷ್ಠ ಮಾಡಿ. ಕರ್ನಾಟಕದಲ್ಲಿ ಪಕ್ಷವನ್ನು ಭದ್ರಗೊಳಿಸಿ. 2025ಕ್ಕೆ ಬೂತ್ ಮಟ್ಟದಲ್ಲಿ ಪಕ್ಷ ಸದೃಢಗೊಳಿಸಬೇಕು. ದೂರ ಇದೆ ಅಂತ ಯಾರೂ ಸುಮ್ಮನೆ ಕೂರುವಂತಿಲ್ಲ. ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲೇಬೇಕು. ಪ್ರತಿ ಗ್ರಾಮ, ವಾರ್ಡ್ಗಳಲ್ಲಿ ಕಮಿಟಿ ರಚನೆಯಾಗಬೇಕು. ಪಂಚಾಯತ್ ಮಟ್ಟದಲ್ಲಿ ಸಮಿತಿ ರಚನೆಯಾಗಬೇಕು ಎಂದು ಕರೆ ನೀಡಿದರು.
ಸಂವಿಧಾನ ಎಂದರೆ ಕೇವಲ ಪೇಪರ್ ಅಲ್ಲ. ಎಲ್ಲ ಜನ, ಸಮುದಾಯಕ್ಕೆ ಸ್ಚಾತಂತ್ರ ಕೊಟ್ಟಿರುವುದು ಸಂವಿಧಾನ. ಕೇಂದ್ರದಲ್ಲಿ ಎಲ್ಲ ಪ್ರಮುಖ ಸ್ಥಾನ ಮೇಲ್ವರ್ಗಕ್ಕಿದೆ. ಜನರಲ್ ಕೆಟಗರಿ ಐಎಎಸ್ ಇದ್ದಾರೆ. ಆರ್ಎಸ್ಎಸ್ನವರು ಸೆಕ್ರೆಟರಿಗಳಾಗಿದ್ದಾರೆ. ಪ್ರಮುಖ ಸ್ಥಾನಗಳು ಎಸ್ಸಿ ಎಸ್ಟಿ, ಒಬಿಸಿಗೆ ಸಿಗ್ತಿಲ್ಲ. ಖಾಸಗಿಯಲ್ಲೂ ಈ ಸಮುದಾಯಗಳಿಗೆ ಬೆಲೆ ಇಲ್ಲ. ಖಾಸಗಿ ವಲಯದಲ್ಲಿ ಅದಾನಿ ಅಂತವರಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲಿ ಸಿಗ್ತಿದೆ. ಬಿಜೆಪಿ ಸರ್ಕಾರದಲ್ಲಿ ಎಸ್ಸಿ ಮತ್ತು ಒಬಿಸಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಕಟ್ ಮಾಡಿದ್ದಾರೆ. ಮನುಸ್ಮೃತಿಯನ್ನು ಎಲ್ಲೆಡೆ ತರ್ತಿದ್ದಾರೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ: ಸಿಎಂ ಕುರ್ಚಿ ಖಾಲಿ ಇಲ್ಲ, ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ: ಸಚಿವ ಹೆಚ್.ಸಿ. ಮಹದೇವಪ್ಪ
ಇದನ್ನೂ ಓದಿ:'ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್' ; ಶೃಂಗೇರಿಯಲ್ಲಿ ಘೋಷಣೆ ಕೂಗಿದ ಕಾರ್ಯಕರ್ತರು