ಮೈಸೂರು:ಲೋಕಸಭಾ ಚುನಾವಣೆಯ 2 ನೇ ಹಂತದ ಮತದಾನ ಮುಗಿದ ತಕ್ಷಣ, ಪರಿಷತ್ ಚುನಾವಣೆ ಬರಲಿದೆ. ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಎಂಬ ಚರ್ಚೆ ಆರಂಭವಾಗಿದ್ದು, ಕಾಂಗ್ರೆಸ್ನಿಂದ ಟಿಕೆಟ್ ಈಗಾಗಲೇ ಬಹುತೇಕ ಫೈನಲ್ ಆಗಿದೆ. ಇದರ ನಡುವೆ ಜೆಡಿಎಸ್ ಹಾಗೂ ಬಿಜೆಪಿಯಿಂದ ಯಾರಿಗೆ ಟಿಕೆಟ್ ಸಿಗಲಿದೆ, ಇಲ್ಲಿಯೂ ಸಹ ಮೈತ್ರಿ ಮುಂದುವರೆಯುವುದೇ ಎನ್ನುವುದನ್ನ ಕಾದು ನೋಡಬೇಕಿದೆ.
ಈಗಾಗಲೇ ನಾಲ್ಕು ಬಾರಿ ಗೆದ್ದಿರುವ ಮರಿತಿಬ್ಬೇಗೌಡ ಕಾಂಗ್ರೆಸ್ ಅಭ್ಯರ್ಥಿ ಎಂಬುದು ಬಹುತೇಕ ಫಿಕ್ಸ್ ಆಗಿದೆ. ಈ ನಡುವೆ ಜೆಡಿಎಸ್ನಿಂದ ಶ್ರೀಕಂಠೇಗೌಡ ಹಾಗೂ ವಿವೇಕಾನಂದ ಎಂಬುವರ ಹೆಸರು ಕೇಳಿ ಬರುತ್ತಿದೆ. ಬಿಜೆಪಿಯಿಂದ E.C. ನಿಂಗರಾಜೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದರೆ ಜೆಡಿಎಸ್ನ ಅಭ್ಯರ್ಥಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ನಡುವೆ ಹಾಸನ ಪೆನ್ಡ್ರೈವ್ ಪ್ರಕರಣ ದಳಪತಿಗಳಿಗೆ ತಲೆನೋವಾಗಿದೆ.
ಕಾಂಗ್ರೆಸ್ ನಿಂದ ಮರಿತಿಬ್ಬೇಗೌಡ ಅಭ್ಯರ್ಥಿ?:ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದಿರುವ ಮರಿತಿಬ್ಬೇಗೌಡ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಎಂದು ನಿಶ್ಚಯವಾಗಿದ್ದು, ಘೋಷಣೆ ಒಂದೇ ಬಾಕಿಯಿದೆ. ಈಗಾಗಲೇ 2 ಸುತ್ತು ಪ್ರಚಾರ ಕೈಗೊಂಡಿರುವ ಮರಿತಿಬ್ಬೇಗೌಡ ನಾಲ್ಕು ಬಾರಿ ಪರಿಷತ್ಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. 2000 ದಲ್ಲಿ ಕಾಂಗ್ರೆಸ್ನಿಂದ, 2006 ರಲ್ಲಿ ಪಕ್ಷೇತರರಾಗಿ ಹಾಗೂ 2012 ಮತ್ತು 2018 ನಲ್ಲಿ ಜಾತ್ಯತೀತ ಜನತಾದಳದಿಂದ ಆಯ್ಕೆ ಆಗಿದ್ದು, 5 ನೇ ಬಾರಿ ಪರಿಷತ್ಗೆ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಈ ಬಾರಿ ಸ್ಪರ್ಧೆ ಮಾಡುತ್ತಿರುವುದು ಮಾತ್ರ ಕಾಂಗ್ರೆಸ್ನಿಂದ ಎಂಬುದು ವಿಶೇಷ.