ಶಿವಮೊಗ್ಗ: ಇತ್ತೀಚಿಗೆ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ 353 ಹೆಕ್ಟೇರ್‌ನಷ್ಟು ಭತ್ತದ ಬೆಳೆ ಹಾನಿಯಾಗಿದೆ. ಅಕ್ಟೋಬರ್ 1ರಿಂದ 23ರವರೆಗೆ ಜಿಲ್ಲೆಯಲ್ಲಿ ಸರಾಸರಿ 12.38 ಸೆಂ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 26.62 ಸೆಂ.ಮೀ ಮಳೆ ಸುರಿದಿದೆ. ಅಂದರೆ, ವಾಡಿಕೆಗಿಂತ ಶೇ.97ರಷ್ಟು ಹೆಚ್ಚು ಮಳೆ ಸುರಿದಿರುವುದರಿಂದ ಹಾನಿ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ. ಬಿರುಗಾಳಿಗೆ ಸಹಿತ ಮಳೆಯಿಂದ ಭತ್ತದ ಬೆಳೆ ನೆಲ ಕಚ್ಚಿದೆ. ಕೆಲವೇ ದಿನಗಳಲ್ಲಿ ಕಟಾವಿಗೆ ಬರುವ ಹಂತದಲ್ಲಿ ಇದ್ದ ಬೆಳೆ ಭೂಮಿ ನೀರು ಪಾಲಾಗಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಜಿಲ್ಲೆಯಲ್ಲಿನ ಬೆಳೆ ನಷ್ಟದ ಪ್ರಮಾಣದ ಕುರಿತು ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯು ಪ್ರತ್ಯೇಕ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿವೆ. ಆದರೆ ಗ್ರಾಮ ಲೆಕ್ಕಾಧಿಕಾರಿಗಳಿಂದ ನಿಖರ ಮಾಹಿತಿ ಕೋರಲಾಗಿದೆ. ಈಗ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ಗ್ರಾಮದಲ್ಲೂ ಸರ್ವೆ ನಡೆಸುತ್ತಿದ್ದು, ಈ ವರದಿಯನ್ನು ಸರ್ಕಾರಕ್ಕೆ ಕಳುಹಿಸಲು ಇಲಾಖೆಗಳು ಸಿದ್ಧತೆ ನಡೆಸುತ್ತಿವೆ.
ಈ ಕುರಿತು ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಶಿವಮೊಗ್ಗ ಜಿಲ್ಲೆಯಾದ್ಯಂತ ಅಕ್ಟೋಬರ್ನಲ್ಲಿ ವಾಡಿಕೆಗಿಂತ ಶೇ.97ರಷ್ಟು ಹೆಚ್ಚು ಮಳೆಯಾಗಿದೆ. ಅ.10ರ ನಂತರ ಸುರಿದ ಮಳೆಯಿಂದ 353 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಭತ್ತ ಮತ್ತು ಮುಸುಕಿನ ಜೋಳ ಬೆಳೆಗಳಿಗೆ ಹಾನಿಯಾಗಿದೆ" ಎಂದರು.