ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ಗಾಯಗೊಂಡು ಇಬ್ಬರ ಮೆದುಳು ನಿಷ್ಕ್ರಿಯ: 8 ಜನರಿಗೆ ಅಂಗಾಂಗ ದಾನ - Organs of accident victims donated

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಇಬ್ಬರ ಅಂಗಾಂಗ ದಾನ ಮಾಡುವ ಮೂಲಕ ಅವರ ಕುಟುಂಬಸ್ಥರು ನೋವಿನಲ್ಲೂ ಹಲವರ ಬದುಕು ಬೆಳಗಿಸಿದ್ದಾರೆ.

ಮೈಸೂರು: ಅಪಘಾತದಲ್ಲಿ ಗಾಯಗೊಂಡ ಇಬ್ಬರ ಮೆದುಳು ನಿಷ್ಕ್ರಿಯ: 8 ಜನರಿಗೆ ಜೀವದಾನ
ಮೈಸೂರು: ಅಪಘಾತದಲ್ಲಿ ಗಾಯಗೊಂಡ ಇಬ್ಬರ ಮೆದುಳು ನಿಷ್ಕ್ರಿಯ: 8 ಜನರಿಗೆ ಜೀವದಾನ

By ETV Bharat Karnataka Team

Published : Mar 19, 2024, 6:57 AM IST

ಮೈಸೂರು:ರಸ್ತೆ ಅಪಘಾತದಿಂದ ಮೃತಪಟ್ಟ ಇಬ್ಬರ ದೇಹದ ಅಂಗಾಂಗಗಳನ್ನು ಅವರ ಪೋಷಕರು ಆಸ್ಪತ್ರೆಗೆ ದಾನ ಮಾಡುವ ಮೂಲಕ 8 ಜೀವಗಳಿಗೆ ಮರುಜನ್ಮ ನೀಡಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿದ್ದರಾಜು (38) ಹಾಗೂ ಎಚ್.ಎಸ್.ಜಗದೀಶ (46) ಎಂಬವರನ್ನು ಕ್ರಮವಾಗಿ ಮಾರ್ಚ್ 4 ಮತ್ತು ಮಾರ್ಚ್ 11ರಂದು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರ ತಲೆಗೂ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಆರಂಭಿಕ ಸಿಟಿ ಸ್ಕ್ಯಾನ್‌ನಲ್ಲಿ ಮೆದುಳಿನ ಅಂಗಾಂಶಕ್ಕೆ ಗಾಯವಾಗಿದ್ದು ಕಂಡುಬಂದಿದ್ದರಿಂದ ಐಸಿಯುಗೆ ಸ್ಥಳಾಂತರಿಸಿ ಜೀವ ರಕ್ಷಣಾ ಬೆಂಬಲದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮಾರ್ಚ್ 6ರಂದು ರಾತ್ರಿ 10.44ಕ್ಕೆ ಹಾಗೂ ಮಾರ್ಚ್ 15ರಂದು ಬೆಳಗ್ಗೆ 12.17ಕ್ಕೆ ಇಬ್ಬರ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಎಂದು ವೈದ್ಯರು ತಿಳಿಸಿದ್ದಾರೆ.

1994ರ ಮಾನವ ಅಂಗಾಂಗಗಳ ಕಸಿ ಕಾಯಿದೆಯ ಅನುಸಾರ ಆಸ್ಪತ್ರೆಯ ಶಿಷ್ಟಾಚಾರದಂತೆ ವೈದ್ಯರ ತಂಡ ಈ ಮಾಹಿತಿ ನೀಡಿದೆ. ಅಪಘಾತಕ್ಕೂ ಮುನ್ನ ಈ ಇಬ್ಬರೂ ಆರೋಗ್ಯವಾಗಿದ್ದರು. ನಂತರ ಮತ್ತಷ್ಟು ಪರೀಕ್ಷೆ ನಡೆಸಿದಾಗ ಇಬ್ಬರೂ ಅಂಗಾಂಗ ದಾನಕ್ಕೆ ಯೋಗ್ಯರಾಗಿರುವುದೂ ತಿಳಿದುಬಂದಿದೆ. ಬಳಿಕ ಇವರ ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಅಂಗ ದಾನದ ಶಿಷ್ಟಾಚಾರದಂತೆ ಎಸ್‌ಟಿಟಿಒ ಅಧಿಕಾರಿಗಳು (ಸ್ಟೇಟ್ ಆರ್ಗನ್ ಆ್ಯಂಡ್ ಟಿಶ್ಯೂ ಟ್ರಾನ್ಸ್ಪ್ಲಾಂಟ್ ಆರ್ಗನೈಸೇಶನ್) ಅಂಗ ಸ್ವೀಕರಿಸುವವರ ನಿರೀಕ್ಷಣಾ ಪಟ್ಟಿಯನುಸಾರ ಪ್ರಕ್ರಿಯೆ ಪ್ರಾರಂಭಿಸಿದರು. ಬಿಜಿಎಸ್ ಆಸ್ಪತ್ರೆಯಲ್ಲಿ ಇಬ್ಬರ ಲಿವರ್, ಶ್ವಾಸಕೋಶ, ಹೃದಯ, ಕಿಡ್ನಿ ಮತ್ತು ಕಾರ್ನಿಯಾಗಳಂತಹ ಅಂಗಗಳನ್ನು ಕ್ರಾಸ್-ಕ್ಲ್ಯಾಂಪ್ ಮೂಲಕ ಹೊರತೆಗೆದು, ಕಳೆದ 9 ದಿನಗಳಲ್ಲಿ 8 ಜೀವಗಳಿಗೆ ಅಳವಡಿಸಲಾಗಿದೆ.

ಕರ್ನಾಟಕದ ಎಸ್‌ಒಟಿಟಿಒ ಅಡಿಯಲ್ಲಿ ಅಂಗಾಂಗ ಕಸಿಗಾಗಿ 5ನೇ ವಲಯ ಎಂದು ಗುರುತಿಸಲ್ಪಟ್ಟಿರುವ ಅಪೋಲೊ ಬಿಜಿಎಸ್ ಆಸ್ಪತ್ರೆ ಬಹುಅಂಗಾಂಗ ಕಸಿಗೆ ಪರವಾನಗಿ ಪಡೆದ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ಅಂಗಾಂಗ ಕಸಿಗಾಗಿ ಹೊಂದಾಣಿಕ ಮಾಡುವ ಸೌಲಭ್ಯವನ್ನು ಸುಲಭಗೊಳಿಸುವ ಸಂಬಂಧ ಬಿಜಿಎಸ್ ಆಸ್ಪತ್ರೆಯೊಂದಿಗೆ ಎಸ್‌ಒಟಿಟಿಒ ಒಂದು ಒಪ್ಪಂದ ಮಾಡಿಕೊಂಡಿದೆ. ಅದರಂತೆ ಅಂಗಾಂಗ ಕಸಿಗೊಳಗಾಗುವ ರೋಗಿಗಳ ಕ್ರಾಸ್ ಮ್ಯಾಚಿಂಗ್ ಅನ್ನು ಬಿಜಿಎಸ್ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುತ್ತದೆ. ಇದರಿಂದ ಬೆಂಗಳೂರಿಗೆ ತೆರಳುವ ಸಮಯ ಉಳಿಯುವುದರಿಂದ ಅಂಗಾಂಗ ಕಸಿಗೂ ಬೇಕಾಗುವ ನಿರ್ಣಾಯಕ ಸಮಯವೂ ಉಳಿತಾಯವಾಗುತ್ತದೆ.

ಅಂಗಾಂಗ ದಾನದಂತಹ ಅತೀ ದೊಡ್ಡ ಮಾನವೀಯ ಕಾರ್ಯ ಕೈಗೊಂಡ ದಾನಿಗಳ ಕುಟುಂಬಸ್ಥರಿಗೆ ಅಪೋಲೊ ಬಿಜಿಎಸ್ ಆಸ್ಪತ್ರೆ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸಿತು.

ಇದನ್ನೂ ಓದಿ:ಸಾವಿನಲ್ಲೂ ಸಾರ್ಥಕತೆ ಮೆರೆದ ಶುಶ್ರೂಷಕ​: ಅಂಗಾಂಗ ದಾನ ಮಾಡಿ 6 ಜನರಿಗೆ ಜೀವ ತುಂಬಿದ ಶೇಖರ್​!

ABOUT THE AUTHOR

...view details