ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಪುರಾಣ ಪ್ರಸಿದ್ಧ ಕಂಚಗಲ್ ಮುನೇಶ್ವರ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಸ್ಫೋಟಕ ದಾಸ್ತಾನು ಗೋದಾಮು ನಿರ್ಮಿಸಿರುವುದನ್ನು ವಿರೋಧಿಸಿ ವಿವಿಧ ಮಠಾಧೀಶರು ಹಾಗೂ ಗ್ರಾಮಸ್ಥರು ಬಾಣವಾಡಿ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು. ಸ್ಫೋಟಕ ಗೋದಾಮು ವಿರೋಧಿಸಿ ಬಂಡೆಮಠ ಶ್ರೀ, ಪಾಲನಹಳ್ಳಿ ಶ್ರೀಗಳ ನೇತೃತ್ವದಲ್ಲಿ ಬಾಣವಾಡಿ ಗ್ರಾ.ಪಂ ಸದಸ್ಯರು ಪಿಡಿಒಗೆ ಮನವಿ ಸಲ್ಲಿಸಿದರು.
ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿ, ನೆಲಮಂಗಲ ತಾಲೂಕು ಹಾಗೂ ಮಾಗಡಿ ತಾಲೂಕಿನ ಗಡಿಯಲ್ಲಿರುವ ಕಂಚಗಲ್ ಮುನೇಶ್ವರ ದೇವಾಲಯದ ಬೆಟ್ಟದ ಸುತ್ತಮುತ್ತ 250 ಎಕರೆಗೂ ಅಧಿಕ ಅರಣ್ಯ ಪ್ರದೇಶವಿದೆ. ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳಿದ್ದು, ಪಕ್ಕದಲ್ಲೇ ದೇವಾಲಯವಿದೆ. ಆದರೆ ಈ ಬೆಟ್ಟದ ಬಳಿಯೇ ಕ್ರಷರ್‌ಗೆ ಸ್ಫೋಟಕಗಳನ್ನು ಪೂರೈಸುವ ಗೋದಾಮು ಸ್ಥಳೀಯರಿಗೆ ಮಾಹಿತಿ ನೀಡದೇ ಕಟ್ಟಡವನ್ನು ನಿರ್ಮಿಸಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಪಾಲನಹಳ್ಳಿ ಮಠದ ಡಾ.ಶ್ರೀ.ಸಿದ್ದರಾಜು ಸ್ವಾಮೀಜಿ ಮಾತನಾಡಿ, ಸ್ಫೋಟಕ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಹಲವಾರು ಸಮಸ್ಯೆಗಳಾಗುತ್ತವೆ. ಇತ್ತೀಚೆಗೆ ಪಟಾಕಿ ದುರಂತ ಹಾಗೂ ತಮಿಳುನಾಡಿನಲ್ಲಿ ಸ್ಫೋಟಕ ದುರಂತ ಗಮನಿಸಿದ್ದೇವೆ. ಪಕ್ಕದಲ್ಲೇ ಐದಾರು ಗ್ರಾಮಗಳಿದ್ದು, ಕೃಷಿ ಭೂಮಿ ಇದೆ. ಲಿಂ.ಶಿವಕುಮಾರ ಮಹಾಸ್ವಾಮೀಗಳ ಹುಟ್ಟೂರಾದ ವೀರಾಪುರದಲ್ಲಿ 111 ಅಡಿ ಎತ್ತರದ ಶ್ರೀಗಳ ಪ್ರತಿಮೆಗೂ ತೊಂದರೆಯಾಗುತ್ತದೆ. ಆದ್ದರಿಂದ ಈ ಸ್ಫೋಟಕ ಗೋದಾಮು ನಮಗೆ ಅವಶ್ಯಕತೆ ಇಲ್ಲ ಎಂದು ಹೇಳಿದರು.