ಮಂಡ್ಯ: ಕಾಂಗ್ರೆಸ್ನವರು ಮೂರು ಬೈ ಎಲೆಕ್ಷನ್ನಲ್ಲಿ ಗೆದ್ದಿದ್ದೇವೆ ಎಂದು ಬೀಗುತ್ತಿದ್ದಾರೆ. ಇದು ತಾತ್ಕಾಲಿಕ ಅಷ್ಟೇ. ನಮ್ಮ ಸರ್ಕಾರ ಹಿಂದೆ ಮೂರು ವರ್ಷ ಆಡಳಿತದಲ್ಲಿದ್ದಾಗ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಾವು 18 ಬೈ ಎಲೆಕ್ಷನ್ ಗೆದ್ದಿದ್ದೇವೆ. ಜನರಲ್ ಎಲೆಕ್ಷನ್ನಲ್ಲಿ ನಾವು ಸೋತಿದ್ದೆವು. 3 ಎಲೆಕ್ಷನ್ ಗೆದ್ದು ಇವರು ಹೀಗೆ ಮೆರೆಯುತ್ತಿದ್ದರಲ್ವಾ? ಇನ್ನು 18 ಬೈ ಎಲೆಕ್ಷನ್ ಗೆದ್ದಿದ್ದ ನಾವು ಹೇಗೆ ಮೆರೆಯಬೇಕು? ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಪಕ್ಷ ಬಲವರ್ಧನೆಗೆ ಇಂದು ಮಂಡ್ಯದಲ್ಲಿ ಬೃಹತ್ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕು ತಗ್ಗಹಳ್ಳಿಯಲ್ಲಿ ಕಾರ್ಯಕರ್ತರ ಸಭೆ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದರು. ಈ ಚುನಾವಣೆ ಸಿದ್ದರಾಮಯ್ಯ, ಡಿಕೆಶಿ ಅವರ ಚುನಾವಣೆಯಲ್ಲ. ಇದು ಕಟ್ರಾಂಕ್ಟರ್ಗಳದ್ದು, ಹಣದ ಚುನಾವಣೆ ಎಂದರು.
ಅವರೊಂದಿಗೆ ಮಾತನಾಡಿ ಧೈರ್ಯ ಹೇಳಿದ್ದೇನೆ:ನಿಖಿಲ್ ಕುಮಾರ್ ಸ್ವಾಮಿ ಕೊನೆ ಗಳಿಗೆಯಲ್ಲಿ ಬಂದರು. ಅವರಿಗೆ ಅದೃಷ್ಟ ಇರಲಿಲ್ಲ. ಮುಂದೆ ಅವರಿಗೆ ಒಳ್ಳೆಯ ಭವಿಷ್ಯ ಇದೆ. ಬೆಳಗ್ಗೆ ಅವರೊಂದಿಗೆ ಮಾತನಾಡಿ ಧೈರ್ಯ ಹೇಳಿದ್ದೇನೆ. ಮುಂಬರುವ ಚುನಾವಣೆಗೆ ಒಟ್ಟಾಗಿ ತಯಾರಾಗೋಣ ಎಂಬಂತಹ ಮಾತನ್ನ ಹೇಳಿದ್ದೇನೆ ಎಂದು ತಿಳಿಸಿದರು.
ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ್ಳೆಯ ರಿಸಲ್ಟ್ ಬಂದಿಲ್ಲ. ಆದರೂ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ ಅಂತಿದ್ದಾರೆ. ಬಿಜೆಪಿ ಸ್ಟೈಲೇ ಹಾಗೆ. ಅಟಲ್ ಬಿಹಾರಿ ವಾಜಪೇಯಿ ಸ್ವತಃ ಪಾರ್ಲಿಮೆಂಟ್ನಲ್ಲಿ ಚುನಾವಣೆಯಲ್ಲಿ ಸೋತರು ಅಂತ ಬೆಂಗಳೂರಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡರು. ಆಗ ಅವರು ನಾನು ಭಯ ಬೀಳಲ್ಲ, ಓಡಿ ಹೋಗಲ್ಲ ಎಂದಿದ್ದರು. 14 ಸೈಟ್ ಲೂಟಿ ಮಾಡಿದ್ದೀರಿ. ದಲಿತರ ಹಣ ನುಂಗಿದ್ದೀರಿ. ಎಲ್ಲಿಯವರೆಗೆ ಅವರಿಗೆ ನ್ಯಾಯ ಸಿಗುವುದಿಲ್ಲವೋ, ಅಲ್ಲಿಯವರೆಗೆ ಕಾಂಗ್ರೆಸ್ ಪಾಪಿಗಳ ಸರ್ಕಾರ ಎಂದು ನಾನು ಹೇಳುತ್ತೇನೆ ಎಂದರು.