ಬೆಂಗಳೂರು:"ಕಾಂಗ್ರೆಸ್ ಸರ್ಕಾರ ಬಂದರೆ ಮಾಂಗಲ್ಯ ಕಿತ್ತು ಹಾಕ್ತಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಈಗ ಸತ್ಯವಾಗಿದೆ" ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು. ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪ್ರಧಾನಿ ಚುನಾವಣೆ ವೇಳೆ ಹೇಳಿದ ಈ ಹೇಳಿಕೆಗೆ ಕಾಂಗ್ರೆಸ್ನವರು ಮುಗಿಬಿದ್ದಿದ್ದರು. ಈಗ ಅವರು ಹೇಳಿರುವುದು ಸತ್ಯವಾಗಿದೆ" ಎಂದರು.
"ರಾಜ್ಯದಲ್ಲಿ ಮಹಿಳೆಯೊಬ್ಬರು ತಮ್ಮ ಮಾಂಗಲ್ಯವನ್ನು ಗೃಹ ಸಚಿವರಿಗೆ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಹೇಳಿದ್ದು ಸತ್ಯ ಆಯಿತಲ್ಲ. ಗ್ಯಾರಂಟಿಯ ಎರಡು ಸಾವಿರ ರೂಪಾಯಿಯಿಂದ ಫ್ರಿಡ್ಜ್ ತಗೊಂಡೆ, ಹೋಳಿಗೆ ಊಟ ಹಾಕಿಸಿದೆ, ಎರಡು ಸಾವಿರ ರೂ. ತಗೊಂಡು ಟೂರ್ ಹೋದೆ, ಬೈಕ್ ತಗೊಂಡೆ ಅಂದ್ರು. ಈಗ ಎಲ್ಲಿಗೆ ಹೋಯಿತು ಎರಡು ಸಾವಿರ?. ನಿಮ್ಮ ಎರಡು ಸಾವಿರ ಸರಿಯಾಗಿ ಪಾವತಿಯಾಗಿದ್ದರೆ, ಇವರು ಏಕೆ ಮೈಕ್ರೋ ಫೈನಾನ್ಸ್ಗೆ ಹೋಗ್ತಾ ಇದ್ದರು?" ಎಂದು ಟೀಕಿಸಿದರು.
"ಕಾಂಗ್ರೆಸ್ ಸರ್ಕಾರ ಮಾಡಿದ ಪಾಪದಿಂದಾಗಿ ಜನರು ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಪಡೆಯುತ್ತಿದ್ದಾರೆ. ಸರ್ಕಾರವೇ ಸಾಲ ನೀಡಿದ್ದರೆ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಗೆ 2022-23ರಲ್ಲಿ ಬಿಜೆಪಿ ಸರ್ಕಾರ 60 ಕೋಟಿ ರೂ. ಅನುದಾನ ನೀಡಿತ್ತು. 2024-25 ರಲ್ಲಿ ಕಾಂಗ್ರೆಸ್ 40 ಕೋಟಿ ರೂ. ನೀಡಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 45 ಕೋಟಿ ರೂ. ನೀಡಿದೆ" ಎಂದು ತಿಳಿಸಿದರು.
"ತಾಂಡಾ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 110 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 60 ಕೋಟಿ ರೂ. ನೀಡಿದೆ. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 50 ಕೋಟಿ ರೂ. ನೀಡಿದೆ. ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದಿಂದ ಹಣ ಫ್ರೀಜ್ ಆಗಿದೆ. ನಿಗಮಗಳಿಗೆ 1,700 ಕೋಟಿ ರೂ. ನೀಡಬೇಕಿದ್ದು, 643 ಕೋಟಿ ರೂ. ನೀಡಲಾಗಿದೆ. ಅಂದರೆ ಎಲ್ಲ ನಿಗಮಗಳಿಗೆ ಒಟ್ಟು 1,055 ಕೋಟಿ ರೂ. ಕೊರತೆಯಾಗಿದೆ. ಈ ಹಣದಲ್ಲಿ ಜನರಿಗೆ ಸಾಲ ನೀಡಬಹುದಿತ್ತು. ಕೊರತೆಯಾದ ಹಣವನ್ನು ಸಾಲವಾಗಿ ಮೈಕ್ರೋ ಫೈನಾನ್ಸ್ಗಳು ನೀಡುತ್ತಿವೆ" ಎಂದರು.
ಕಾಂಗ್ರೆಸ್ ಸರ್ಕಾರದಿಂದಾಗಿ ರೌಡಿಗಳಿಗೆ ಉದ್ಯೋಗ ಸಿಕ್ಕಿದೆ :"ಮೈಕ್ರೋ ಫೈನಾನ್ಸ್ನ ಮೀಟರ್ ಬಡ್ಡಿ ದಂಧೆಯಲ್ಲಿ ರೌಡಿಗಳು ಈವರೆಗೆ ಸುಮ್ಮನಿದ್ದರು. ಕಾಂಗ್ರೆಸ್ ಸರ್ಕಾರದಿಂದಾಗಿ ರೌಡಿಗಳಿಗೆ ಉದ್ಯೋಗ ಸಿಕ್ಕಿದೆ. ಬಡ ಜನರು ಸಾಲ ಮಾಡಿದರೆ ಮನೆ ಬಿಟ್ಟು ಹೊರಡಬೇಕಾಗಿದೆ. ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಸಾಲ ನೀಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ನಿಗಮಗಳ ಮೂಲಕ ಸಾಲ ನೀಡದೇ ಇರುವುದರಿಂದ ಜನರು ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್ಗಳ ಮೊರೆ ಹೋಗಿದ್ದಾರೆ" ಎಂದು ದೂರಿದರು.
"ಮೈಕ್ರೋ ಫೈನಾನ್ಸ್ನಲ್ಲಿ 10 ಜನರ ಗುಂಪು ರಚಿಸಿ, ಪ್ರತಿಯೊಬ್ಬರಿಗೂ 50 ಸಾವಿರ ರೂ. ಸಾಲ ನೀಡುತ್ತಾರೆ. ಒಬ್ಬರಿಗೆ ಉಳಿದವರು ಶ್ಯೂರಿಟಿ ಕೊಡಬೇಕಾಗುತ್ತದೆ. ಪ್ರತಿ ತಿಂಗಳು ಅಧಿಕ ಬಡ್ಡಿ ಕಟ್ಟಬೇಕಾಗುತ್ತದೆ. 50 ಸಾವಿರ ರೂ. ಸಾಲ ಪಡೆದರೆ 67 ಸಾವಿರ ರೂ. ವಾಪಸ್ ನೀಡಬೇಕು. ಎರಡು ತಿಂಗಳು ಕಟ್ಟಲಿಲ್ಲವೆಂದರೆ ರೌಡಿಗಳು ಮನೆಗೆ ಹೋಗಿ ಗಲಾಟೆ ಮಾಡುತ್ತಾರೆ. ಅನೇಕ ಹಳ್ಳಿಗಳಲ್ಲಿ ಜನರು ಮನೆ ಬಿಟ್ಟು ವಲಸೆ ಹೋಗಿದ್ದಾರೆ" ಎಂದು ಆರ್ ಅಶೋಕ್ ಆತಂಕ ವ್ಯಕ್ತಪಡಿಸಿದರು.