ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಅಂಬಿಕಾಪತಿ ಸುಳ್ಳಿನ ಮಹಲ್ ಕಟ್ಟಿದ್ರು. ಆದರೆ, ಅದು ಈಗ ಕುಸಿದು ಬಿದ್ದು ಹೋಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಬಿಜೆಪಿ ಕಚೇರಿಯಲ್ಲಿ ಸಂಸದ ಗೋವಿಂದ ಕಾರಜೋಳ ಜೊತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಳ್ಳು ರಾಮಯ್ಯ ಅನ್ನೋದು ಇವತ್ತು ಪ್ರೂವ್ ಆಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ನವರು 40% ಆರೋಪ ಮಾಡಿದ್ದರು, ಈಗ ನಾವು ಆರೋಪ ಮುಕ್ತವಾಗಿದ್ದೇವೆ. ಕೆಂಪಣ್ಣ ಮತ್ತೆ ಪದ್ಮನಾಭ ಅವರು ಕಾಂಗ್ರೆಸ್ನ ಟೂಲ್ಕಿಟ್ ಆಗಿ ಕೇಸ್ ದಾಖಲು ಮಾಡಿದ್ರು. ಆರು ವರ್ಷದಿಂದ ಅಂಬಿಕಾಪತಿ ಗುತ್ತಿಗೆ ಕೆಲಸ ಮಾಡಿಲ್ಲ. ನಿರುದ್ಯೋಗಿ ಕಾಂಟ್ರಾಕ್ಟರ್ ಎಲ್ಲಾ ಸೇರಿ 40% ಸರ್ಕಾರ ಎಂದು ಆರೋಪ ಮಾಡಿದ್ದರು. ಕೋವಿಡ್ ಹಗರಣ ಬಗ್ಗೆ ಹೇಳ್ತಿದ್ದಾರೆ ಈಗ. 40% ಆರೋಪ ಸಂಬಂಧ ಹೈಕೋರ್ಟ್ನಲ್ಲಿ ದಾಖಲೆ ಕೊಟ್ಟಿಲ್ಲ. ನೋಟಿಸ್ ಕೊಟ್ರು ಅಟೆಂಡ್ ಆಗಿಲ್ಲ. ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದೆ. ಅವರು ಆರು ವರ್ಷದಿಂದ ಕೆಲಸ ಮಾಡಿಲ್ಲ. ಹೇಗೆ ಪರ್ಸೆಂಟೇಜ್ ಕೊಡ್ತಾರೆ ಎಂದು ಲೊಕಾಯುಕ್ತ ಕೇಸ್ ವಜಾ ಮಾಡಿದೆ ಎಂದು ಅಶೋಕ್ ಹೇಳಿದ್ರು.
ಸಿದ್ದರಾಮಯ್ಯ ಮುಸ್ಲಿಮರ ಹೀರೋ ಆಗುವುದಕ್ಕೆ ಹೊರಟಿದ್ದಾರೆ:''ಸಿದ್ದರಾಮಯ್ಯ ತೆರೆದ ಪುಸ್ತಕ ಅಂತಾರೆ. ದಿನ ಒಬ್ಬೊಬ್ಬ ಮಂತ್ರಿ ದರೋಡೆಯ ಪುಸ್ತಕ ತೆರೆಯುತ್ತಿದ್ದಾರೆ. ಕನ್ನ ಹಾಕುವ ಮಂತ್ರಿ ರಾಜ್ಯದಲ್ಲಿ ಇದ್ದಾರೆ. ತೆರೆದ ಪುಸ್ತಕ ನಾವು ನೋಡಿದ್ರೆ ಕಪ್ಪು ಚುಕ್ಕೆ ಇಡೋಕೆ ಜಾಗನೆ ಇಲ್ಲ. ಸಿದ್ದರಾಮಯ್ಯ ಅವರ ಕುಟುಂಬ ಲೂಟಿ ಮಾಡ್ತಿದೆ. ನನ್ನ ಮುಟ್ಟಿ ನೋಡಿ, ಕೇಸ್ ಹಾಕಿ ನೋಡಿ ಸಿಎಂ ಪದವಿಯಿಂದ ಇಳಿಯುವುದಿಲ್ಲ ಅಂತಿದ್ದಾರೆ. ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಹೀಗೆ ಹೇಳ್ತಿರಾ?. 14 ಸೈಟ್ಗಳನ್ನು ಯಾಕೆ ವಾಪಸ್ ಕೊಟ್ರಿ?. ಏಕ ವಚನದಲ್ಲಿ ಮಾತಾಡ್ತಾರೆ. ಕೇಳುದ್ರೆ ಹಳ್ಳಿಯಿಂದ ಬಂದವನು ಅಂತಾರೆ. ನಾನು ಸೈಟ್ ವಾಪಸ್ ಮಾಡಿಲ್ಲ. ನನ್ನ ಹೆಂಡ್ತಿ ನನಗೆ ಗೊತ್ತಿಲ್ಲದೆ ಕೊಟ್ಟಿದ್ದಾರೆ ಅಂತಾರೆ. ಅಹಿಂದ ನಾಯಕರಾಗಿಲ್ಲಾ ಅವರು. ಈಗ ಅವರು ಅಲ್ಪಸಂಖ್ಯಾತರ ಚಾಂಪಿಯನ್ ಆಗಿದ್ದಾರೆ. ಮುಸ್ಲಿಮರ ಹೀರೋ ಆಗುವುದಕ್ಕೆ ಹೊರಟಿದ್ದಾರೆ'' ಎಂದು ಟೀಕಿಸಿದರು.
''ಪ್ರಧಾನಿ ಬಗ್ಗೆ ಸಿಎಂ ಮಾತಾಡಿದ್ದಾರೆ. ದಾಖಲೆ ಕೊಡಿ ಅಂತಾ ಕೇಳಿದ್ದಾರೆ. ದಾಖಲೆ ಕೊಟ್ರು ಪ್ರಧಾನಿ ಮೇಲೆ ಆರೋಪ ಮಾಡ್ತಿದ್ದಾರೆ. ರಾಜಭವನಕ್ಕೆ ದೂರು ನೀಡಿದ್ದವರ ಮೇಲೆ ಎಸ್ಐಟಿ ರಚನೆ ಮಾಡಿ. ಅಬಕಾರಿ ಮಾಲೀಕರ ಸಂಘದವರ ಮೇಲೆ ಎಸ್ಐಟಿ ಮಾಡಿ. ಲೂಟಿ ಹೊಡೆದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದೀರಿ. 40% ಹೇಳುದ್ರು ಅದು ಸುಳ್ಳಾಯ್ತು. ಮುಖ್ಯಮಂತ್ರಿಗಳನ್ನು ಸಿದ್ದರಾಮಯ್ಯ ಅನ್ನೋದು ಬಿಟ್ಟು ಸುಳ್ಳುರಾಮಯ್ಯ ಅಂತ ಕರಿಬೇಕು'' ಎಂದು ಕಿಡಿಕಾರಿದರು.