ಬೆಳಗಾವಿ:ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಡವರ ರಕ್ತವನ್ನು ತಿಗಣೆಯ ರೀತಿಯಲ್ಲಿ ಹೀರುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದರು.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಸೋಲಿನ ಕೋಪಕ್ಕೆ ರಾಜ್ಯದಲ್ಲಿ ಬೆಲೆ ಏರಿಕೆ ಪರ್ವ ಶುರುವಾಗಿದೆ. ಸಿಮೆಂಟ್, ಕಬ್ಬಿಣ ಸೇರಿ ಎಲ್ಲ ವಸ್ತುಗಳ ಬೆಲೆ ಏರಿಸಲಾಗಿದೆ. ಇದೀಗ ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಿಸಿದ್ದಾರೆ. ಕಳೆದ ವರ್ಷ ಮೂರು ರೂಪಾಯಿ ಜಾಸ್ತಿ ಮಾಡಿದ್ದರು ಎಂದರು.
ಈ ಸರ್ಕಾರ ಬಹಳ ದಿನ ಉಳಿಯಲ್ಲ. ನಾಲ್ಕು ರಾಜ್ಯಗಳ ಚುನಾವಣೆಗೆ ಕಪ್ಪ ಕಾಣಿಕೆ ಕೊಡಲು ಬೆಲೆ ಏರಿಕೆ ಮಾಡಿದ್ದಾರೆ. ಈ ರೀತಿ ಲೂಟಿ ಹೊಡೆಯುವ ಲೂಟಿಕೋರ ತಂಡಕ್ಕೆ ಮುಂಬರುವ ಜಿ.ಪಂ, ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.