ಬೆಂಗಳೂರು:ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭಯೋತ್ಪಾದನೆ ಚಟುವಟಿಕೆ ಹತ್ತಿಕ್ಕುವಲ್ಲಿ ಮಹತ್ವದ ಸಾಧನೆ ಮಾಡಿದೆ. ಬಾಂಬ್ ಇಟ್ಟವರ ಬಂಧನದಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು (ಶನಿವಾರ) ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಮೇಶ್ವರ ಕೆಫೆ ಸ್ಫೋಟ ಪ್ರಕರಣವನ್ನು ತಿರುಚುವ ಯತ್ನ ನಡೆಯಿತು ಎಂದು ಆರೋಪಿಸಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತನಿಖೆಗೂ ಮೊದಲೇ ದಾರಿ ತಪ್ಪಿಸುವ ಕೆಲಸ ಮಾಡಿದರು. ಅಲ್ಪಸಂಖ್ಯಾತರಿಗೆ ನೋವಾಗಬಾರದು ಎಂಬುದು ಕಾಂಗ್ರೆಸ್ನ ಮನಸ್ಥಿತಿ ಎಂದು ಟೀಕಿಸಿದರು.
ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ನ ಆಪ್ತರು. ಅವರ ರಾಜ್ಯದಲ್ಲೇ ಆರೋಪಿಗಳು ಸಿಕ್ಕಿದ್ದಾರೆ. ಇಲ್ಲಿ 'ಬ್ರದರ್ಸ್' ಆಯ್ತು, ಈಗ 'ಸಿಸ್ಟರ್' ಊರಲ್ಲಿ ಉಗ್ರರನ್ನು ಬಂಧಿಸಲಾಗಿದೆ. ಸೇಫ್ ಎಂಬ ಕಾರಣಕ್ಕಾಗಿ ಬೇರೆ ರಾಜ್ಯಗಳ ಬದಲಿಗೆ ಬಂಗಾಳವನ್ನೇ ಉಗ್ರರು ಆಯ್ಕೆ ಮಾಡಿಕೊಂಡಿದ್ದಾರೆ. ಎನ್ಐಎ ದಾಳಿಗೆ ಅಲ್ಲಿನ ಪೊಲೀಸರು ಸಹಕಾರ ನೀಡಿದ್ದಾರೆ ಅಷ್ಟೆ. ಕಾಮನ್ಸೆನ್ಸ್ ಇಲ್ಲದೆ ಯಾವುದೇ ಮಂತ್ರಿಗಳು ಮಾತನಾಡಬಾರದು ಎಂದು ಟಾಂಗ್ ನೀಡಿದರು.
ಪಾಕಿಸ್ತಾನ ಪರ ಘೋಷಣೆ:ವಿಧಾನಸೌಧದಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದನ್ನು ಕಾಂಗ್ರೆಸ್ ನಾಯಕರು ನಿರಾಕರಿಸಿದರು. ಪೊಲೀಸರ ಎಫ್ಎಸ್ಎಲ್ ವರದಿ ಬಳಿಕ ಅದು ನಿಜವಾಯಿತು. ನಮ್ಮನ್ನೇ ಕಾಮಾಲೆ ಕಣ್ಣಿನವರು ಎಂದು ಟೀಕಿಸಿದರು. ಈಗ ಯಾರಿಗೆ ಕಾಮಾಲೆಯಾಗಿದೆ ಎಂಬುದುನ್ನು ಹೇಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ವಾಗ್ದಾಳಿ ನಡೆಸಿದರು.