ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಮಂಗಳೂರು:ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ ಕೊಟ್ಟಿದ್ದು ಕೇವಲ 0.8ರಷ್ಟು ಮಾತ್ರ ಎಂದು 2024-25ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಕೊಡುಗೆ ಜಾಸ್ತಿ ನೀಡಲಾಗಿದೆ ಎಂಬ ಆರೋಪಕ್ಕೆ ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದರು.
''ಈ ಬಾರಿಯ ಬಜೆಟ್ ಗಾತ್ರ 3 ಲಕ್ಷ 71 ಸಾವಿರ ಕೋಟಿ ರೂಪಾಯಿ. ಇದರಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ್ದು 3,000 ಕೋಟಿ ರೂಪಾಯಿ. ಅಲ್ಪಸಂಖ್ಯಾತರ ಜನಸಂಖ್ಯೆ ರಾಜ್ಯದಲ್ಲಿ ಶೇ.14ರಷ್ಟಿದೆ. ಆದರೆ, ಅವರಿಗೆ ಬಜೆಟ್ನಲ್ಲಿ ಕೊಟ್ಟಿದ್ದು ಶೇಕಡಾ 0.8ರಷ್ಟು ಮಾತ್ರ, ಇದು ಜಾಸ್ತಿಯಾ'' ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ ಜಾಸ್ತಿ ಹಣ ಮೀಸಲಿಟ್ಟ ಆರೋಪದಲ್ಲಿ ಬಿಜೆಪಿ ಅವರು ನನ್ನ ಎದುರು ಕಪ್ಪು ಬಾವುಟ ಪ್ರದರ್ಶನ ಮಾಡಿಲ್ಲ. ಬೇರೆಯವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿರಬೇಕು. ಅವರಿಗೆ ಬೇರೆ ಸಮುದಾಯದವರನ್ನು ಕಂಡರೆ ಆಗಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿ ಹೀಗೆ ಮಾಡ್ತಾರೆ"ಎಂದು ಸಿಎಂ ಕಿಡಿಕಾರಿದರು.
''ಬಜೆಟ್ನಲ್ಲಿ ಮೀನುಗಾರರಿಗೆ 1,000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಮೊದಲನೇ ಬಾರಿ ಸಮುದ್ರ ಆ್ಯಂಬುಲೆನ್ಸ್ ಆರಂಭಿಸಲಾಗುತ್ತಿದೆ. 10 ಸಾವಿರ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಬಂಪರ್ ಕೊಡುಗೆ ನೀಡಲಾಗಿದೆ'' ಎಂದು ಸಿದ್ದರಾಮಯ್ಯ ತಿಳಿಸಿದರು.
ಜೆರೊಸಾ ಶಾಲಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಈ ಪ್ರಕರಣದ ಕುರಿತು ಎಫ್ಐಆರ್ ದಾಖಲು ಮಾಡಲಾಗಿದೆ. ವಿಚಾರಣೆ ಬಳಿಕ ಬರುವ ರಿಪೋರ್ಟ್ ನೋಡಿ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು. ಕಮಲನಾಥ್ ಅವರು ಬಿಜೆಪಿ ಸೇರುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರಿಗೆ ಆಪರೇಷನ್ ಕಮಲ ಮಾಡುವುದೇ ಒಂದು ಕೆಲಸ ಆಗಿದೆ. ನಮ್ಮ ಶಾಸಕರಿಗೆ 50 ಕೋಟಿ ರೂ. ಆಫರ್ ಕೊಟ್ಟಿದ್ದರು. ಇದು ಈಗ ದೇಶದಲ್ಲಿ ನಡೆಯುತ್ತಿದೆ. ಹಣದ ಆಫರ್ಗೆ ಬಗ್ಗದೆ ಹೋದರೆ ಇಡಿ, ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಮೂಲಕ ಹೆದರಿಸಲಾಗುತ್ತಿದೆ'' ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ದಾವಣಗೆರೆ: ಸಿದ್ದರಾಮಯ್ಯ ಬಜೆಟ್ಗೆ ಜನರಿಂದ ಪರ - ವಿರೋಧ ಅಭಿಪ್ರಾಯ
ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸಿಎಂ ಮಾಧ್ಯಮಗಳ ಜೊತೆ ಮಾತನಾಡಿದರು. ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದರು.