ಬೆಂಗಳೂರು:ಆನ್‌ಲೈನ್ ಮೂಲಕ ಹಣ ಪಾವತಿಸಿ ಬೂಟುಗಳನ್ನು ಖರೀದಿಸಿದರೂ ತಲುಪಿಸದ ಹಿನ್ನೆಲೆಯಲ್ಲಿ ಗ್ರಾಹಕನಿಗೆ 3 ಸಾವಿರ ರೂಪಾಯಿ ಪರಿಹಾರ ನೀಡುವಂತೆ ವುಡ್‌ಲ್ಯಾಂಡ್ ಸಂಸ್ಥೆಗೆ ಗ್ರಾಹಕರ ಪರಿಹಾರ ವೇದಿಕೆ ನಿರ್ದೇಶನ ನೀಡಿದೆ.
ಬೆಂಗಳೂರು ನಗರದ ಕೆಂಗೇರಿ ನಿವಾಸಿ ಸ್ಮಿತಾ ಮೋಹನ್ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರದ ಎರಡನೇ ಹೆಚ್ಚುವರಿ ಗ್ರಾಹಕರ ಪರಿಹಾರ ವೇದಿಕೆ ನ್ಯಾಯಾಧೀಶ ವಿಜಯ್ ಕುಮಾರ್ ಎಂ.ಪಾವ್ಲೆ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ಮಾಡಿತು.
ಗ್ರಾಹಕರು ಈಗಾಗಲೇ ಪಾವತಿ ಮಾಡಿದ್ದ 6,995 ರೂ.ಗಳನ್ನು ಹಿಂತಿರುಗಿಸಬೇಕು. 2 ಸಾವಿರ ರೂ. ಪರಿಹಾರ ಮತ್ತು 1 ಸಾವಿರ ರೂ. ನ್ಯಾಯಾಂಗ ಹೋರಾಟದ ವೆಚ್ಚವಾಗಿ ಪಾವತಿ ಮಾಡಬೇಕು. ಮುಂದಿನ 45 ದಿನಗಳಲ್ಲಿ ಪಾವತಿಸಬೇಕು ಎಂದು ಪೀಠ ಆದೇಶಿಸಿತು.
ಪ್ರಕರಣದ ಹಿನ್ನೆಲೆ:ದೂರುದಾರರು 2023 ರ ಮೇ ತಿಂಗಳಲ್ಲಿ ವುಡ್‌ಲ್ಯಾಂಡ್ ಕಂಪೆನಿಯ ಬೂಟುಗಳನ್ನು ಆನ್‌ಲೈನ್ ಮೂಲಕ 6,995 ರೂ. ಪಾವತಿಸಿ ಖರೀದಿಸಿದ್ದರು.
ಹಲವು ದಿನಗಳು ಕಳೆದರೂ ಗ್ರಾಹಕರಿಗೆ ತಾವು ಖರೀದಿಸಿದ್ದ ಬೂಟುಗಳು ತಲುಪಿರಲಿಲ್ಲ. ಹಲವು ಬಾರಿ ಸಂಸ್ಥೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಲೀಗಲ್ ನೋಟಿಸ್ ಜಾರಿ ಮಾಡಿದರೂ ಫಲ ನೀಡಲಿಲ್ಲ. ಇದರಿಂದ ಬೇಸತ್ತ ದೂರುದಾರರು, ಗ್ರಾಹಕರ ಪರಿಹಾರ ವೇದಿಕೆಗೆ ದೂರು ನೀಡಿ 50 ಸಾವಿರ ರೂ ಪರಿಹಾರ ಕೊಡಿಸಬೇಕು ಎಂದು ಕೋರಿದ್ದರು.
ವಿಚಾರಣೆ ನಡೆಸಿದ ಗ್ರಾಹಕರ ಪರಿಹಾರ ವೇದಿಕೆ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಆದರೂ, ಪ್ರತಿವಾದಿ ಕಂಪೆನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ ಆದೇಶ ನೀಡಿದೆ.
ಇದನ್ನೂ ಓದಿ:ಬ್ಯಾಗ್ ಗೆ ಹೆಚ್ಚುವರಿ ಹಣ ಪಡೆದ ಶಾಪಿಂಗ್ ಮಳಿಗೆಗೆ 7 ಸಾವಿರ ರೂ. ದಂಡ ವಿಧಿಸಿದ ಕೋರ್ಟ್ - Consumer Court
ವಿಶ್ವ ಇಡ್ಲಿ ದಿನ: 12 ತಿಂಗಳಲ್ಲಿ 7.3 ಲಕ್ಷ ರೂಪಾಯಿ ಮೌಲ್ಯದ ಇಡ್ಲಿ ಆರ್ಡರ್ ಮಾಡಿದ ಸ್ವಿಗ್ಗಿ ಗ್ರಾಹಕ - world idli day 2024