ಬೆಳಗಾವಿ:ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಇಂದು ಈರುಳ್ಳಿಗೆ ಬಂಪರ್ ಬೆಲೆ ಸಿಕ್ಕಿದೆ. ಈ ವರ್ಷದಲ್ಲೆ ಒಳ್ಳೆಯ ದರ ಸಿಕ್ಕಿದ್ದರಿಂದ ರೈತರು ಫುಲ್ ಖುಷ್ ಆಗಿದ್ದಾರೆ. ಕಷ್ಟ ಪಟ್ಟು ಬೆಳೆದಿದ್ದ ಈರುಳ್ಳಿ ಒಳ್ಳೆಯ ಲಾಭ ತಂದು ಕೊಟ್ಟಿದ್ದರಿಂದ ಸಂತಸದಿಂದ ರೈತರು ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಈ ಬಾರಿ ಮಳೆ ಹೆಚ್ಚಾದ ಪರಿಣಾಮ ರೈತರಿಗೆ ನಿರೀಕ್ಷೆಗೆ ತಕ್ಕಷ್ಟು ಈರುಳ್ಳಿ ಇಳುವರಿ ಬಂದಿಲ್ಲ. ಆದರೆ ಹರಸಾಹಸ ಪಟ್ಟು ಉಳಿಸಿಕೊಂಡ ಈರುಳ್ಳಿಯನ್ನು ಬೆಳಗಾವಿ ಎಪಿಎಂಸಿಗೆ ಮಾರಾಟಕ್ಕೆ ತಂದಿದ್ಧ ರೈತರಿಗೆ ಜಾಕಪಾಟ್ ಹೊಡೆದಿದೆ. ಗುಣಮಟ್ಟದ ಈರುಳ್ಳಿ ಕ್ವಿಂಟಾಲ್ 6,500 ರೂ.ವರೆಗೆ ಮಾರಾಟವಾಗಿದೆ. ಇದು ಈ ವರ್ಷಕ್ಕೆ ಹೋಲಿಸಿದರೆ ದಾಖಲೆ ಬೆಲೆ ಎನ್ನುತ್ತಾರೆ ವ್ಯಾಪಾರಿಗಳು ಮತ್ತು ರೈತರು.
ಬೆಳಗಾವಿ ಮಾರುಕಟ್ಟೆಗೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ವಿವಿಧ ಗ್ರಾಮಗಳಿಂದ ಈರುಳ್ಳಿ ಮಾರಾಟಕ್ಕೆ ತರುತ್ತಾರೆ. ಅಲ್ಲದೇ ಮಹಾರಾಷ್ಟ್ರದ ಕೆಲ ರೈತರು ಕೂಡ ಇದೇ ಮಾರುಕಟ್ಟೆ ಅವಲಂಬಿಸಿದ್ದಾರೆ. ಇಲ್ಲಿಂದ ಕರ್ನಾಟಕ, ಗೋವಾ, ಪಶ್ಚಿಮ ಬಂಗಾಳ, ಅಸ್ಸೋಂ, ತೆಲಂಗಾಣ, ಆಂಧ್ರಪ್ರದೇಶ ಸೇರಿ ಮತ್ತಿತರ ಪ್ರದೇಶಗಳಿಗೆ ಈರುಳ್ಳಿ ರಫ್ತಾಗುತ್ತದೆ.
ಈ ಬಾರಿ ಮಳೆಯಿಂದಾಗಿ ಹಾನಿಯಾಗಿ ಆವಕ ಕಡಿಮೆ ಆಗಿದೆ. ಹಾಗಾಗಿ, ದರ ಹೆಚ್ಚಿದೆ. ನಿನ್ನೆ ಬುಧವಾರ 2,200-6,500ರೂ. ವರೆಗೆ ಕ್ವಿಂಟಾಲ್ ಈರುಳ್ಳಿ ಮಾರಾಟವಾಗಿದೆ. ಹಾಗೇ 7,773 ಕ್ವಿಂಟಾಲ್ ಈರುಳ್ಳಿ ಮಾತ್ರ ಆವಕವಾಗಿದೆ.