ದಾವಣಗೆರೆ :ಒಂದು ಕಾಲದಲ್ಲಿ ಈರುಳ್ಳಿ ಗ್ರಾಹಕರ ಕಣ್ಣೀರನ್ನು ತರಿಸುವಷ್ಟು ಬೆಲೆ ಏರಿಕೆ ಕಂಡಿತ್ತು. ಅದೆಷ್ಟೋ ರೈತರು ಈರುಳ್ಳಿ ಮಾರಾಟ ಮಾಡಿ ರಾತ್ರೋರಾತ್ರಿ ಶ್ರೀಮಂತರಾದ ಉದಾಹರಣೆ ಇದೆ. ದುರಂತ ಎಂದರೆ ಈರುಳ್ಳಿ ಬೆಲೆ ದಿಢೀರ್ ಅಂತ ಕುಸಿತ ಕಂಡಿದೆ. ಹೊರ ದೇಶಕ್ಕೆ ಈರುಳ್ಳಿ ರಫ್ತು ಮಾಡ್ತಿದ್ದ ಕೇಂದ್ರ ಸರ್ಕಾರ ರಫ್ತನ್ನ ಧಿಡೀರ್ ನಿಲ್ಲಿಸಿದ್ದರಿಂದ ಹಾಗೂ ಈರುಳ್ಳಿ ಫಸಲು ಅಧಿಕವಾಗಿರುವುದರಿಂದ ಬೆಲೆ ಕುಸಿದಿದೆ. ಇದರಿಂದ ಈರುಳ್ಳಿ ಮಾರಾಟ ಆಗದೇ ಬೆಣ್ಣೆ ನಗರಿ ರೈತರು ಕಂಗಾಲಾಗಿದ್ದಾರೆ.
ಹೆಚ್ಚು ಈರುಳ್ಳಿ ಬೆಳೆದಿದ್ದ ರೈತರು ದಾವಣಗೆರೆ ಎಪಿಎಂಸಿ ಮಾರ್ಕೆಟ್ಗೆ ತಂದು ಮಾರಾಟ ಮಾಡದೇ ಬಿಟ್ಟು ಹೋಗಿರುವ ಉದಾಹರಣೆಗಳಿವೆ ಎಂದು ದಲ್ಲಾಳಿಗಳ ಸಂಘದ ಅಧ್ಯಕ್ಷರಾದ ಬಸವಲಿಂಗಪ್ಪ ಅವರು ತಿಳಿಸಿದ್ದಾರೆ. ಇಂದು ಒಂದೇ ದಿನ ಆರರಿಂದ ಏಳು ಸಾವಿರ ಚೀಲ ಈರುಳ್ಳಿ ದಾವಣಗೆರೆ ಮಾರುಕಟ್ಟೆಗೆ ಬಂದಿದ್ದು, ಅಚ್ಚರಿಗೆ ಕಾರಣವಾಗಿತ್ತು. ಇನ್ನು ಈ ಹಿಂದೆ ಕೆಜಿಗೆ 80 ರಿಂದ 100 ರೂ. ಗಡಿ ಮುಟ್ಟಿದ್ದ ಈರುಳ್ಳಿ ಬೆಲೆ ಧಿಡೀರ್ 03 ರಿಂದ 04 ರೂಪಾಯಿಗೆ ಇಳಿಕೆ ಕಂಡಿದ್ದರಿಂದ ಮಾರುಕಟ್ಟೆಗೆ ತಂದ ಈರುಳ್ಳಿಗೆ ಲಾರಿ ಬಾಡಿಗೆ ಸಿಕ್ಕರೆ ಸಾಕು ಎನ್ನುವ ಸ್ಥಿತಿ ರೈತರದ್ದಾಗಿತ್ತು. ಇನ್ನು ಕೆಲ ರೈತರು ದರ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಕಾಯುತ್ತಾ ಕುಳಿತಿದ್ದಾರೆ.
ಈರುಳ್ಳಿ ಬೆಲೆ ಎಷ್ಟಿದೆ ಗೊತ್ತಾ?:ಚಿಕ್ಕ ಈರುಳ್ಳಿ ಒಂದು ಕ್ವಿಂಟಾಲ್ಗೆ 200 ರೂಪಾಯಿ ಇದ್ದು, ದೊಡ್ಡ ಹಾಗೂ ಉತ್ತಮ ದಪ್ಪ ಈರುಳ್ಳಿಗೆ ಒಂದು ಕ್ವಿಂಟಾಲ್ಗೆ 1000 ರಿಂದ 1100 ರೂ. ಬೆಲೆ ಇದೆ. ಮಧ್ಯಮ ಗಾತ್ರದ ಈರುಳ್ಳಿ ಕ್ವಿಂಟಾಲ್ಗೆ 700 ರಿಂದ 800ರೂ.
ದರ ಇರುವುದರಿಂದ ರೈತರು ತಂದ ಈರುಳ್ಳಿಯನ್ನ ಮಾರುಕಟ್ಟೆಯಲ್ಲೇ ಬಿಟ್ಟು ಹೋಗ್ತಿದ್ದಾರೆ. ಹೊರ ದೇಶಕ್ಕೆ ರಫ್ತು ನಿಲ್ಲಿಸಿದ ಬೆನ್ನಲ್ಲೇ ಈರುಳ್ಳಿ ಬೆಲೆ ಕುಸಿತ ಕಂಡಿದೆ. ಹೀಗಾಗಿ ಬೆಳೆಗೆ ಹಾಕಿದ ಬಂಡವಾಳ ಬಂದರೆ ಸಾಕು ಎನ್ನುತ್ತಿದ್ದಾರೆ ಈರುಳ್ಳಿ ಬೆಳೆಗಾರರು. ರಾಜ್ಯದ ಬಹುತೇಕ ಕಡೆ ಬರಗಾಲ ಇದ್ದರೂ ಈ ನಡುವೆ ಭಾರಿ ಪ್ರಮಾಣದಲ್ಲಿ ಈರುಳ್ಳಿ ಬಂದಿದೆ. ಬೇರೆ ಕಡೆ ರಫ್ತಾಗುವುದನ್ನ ನಿಲ್ಲಿಸಿದ ಸರ್ಕಾರದ ನೀತಿಯಿಂದ ರೈತರು ಬೇಸತ್ತು ಹಿಡಿಶಾಪ ಹಾಕ್ತಿದ್ದಾರೆ. ಈರುಳ್ಳಿಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಇದೇ ವೇಳೆ ರೈತರು ಆಗ್ರಹಿಸಿದ್ದಾರೆ.