ಹುಬ್ಬಳ್ಳಿ:ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಈರುಳ್ಳಿ, ಶೇಂಗಾ, ಮೆಕ್ಕೆಜೋಳ ಹಾಗೂ ವಿವಿಧ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ. ಹುಬ್ಬಳ್ಳಿ ತಾಲೂಕಿನ ಹಳ್ಯಾಳ, ಕಡಪಟ್ಟಿ, ನವಲಗುಂದ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಮಳೆಯಾಶ್ರಿತ ಮತ್ತು ನೀರಾವರಿ ಆಶ್ರಿತ 945.7 ಹೆಕ್ಟೇರ್ ಭೂಮಿಯಲ್ಲಿ 2,384 ರೈತರು ಬೆಳೆದಿದ್ದ ಹತ್ತಿ, ಮೆಕ್ಕೆಜೋಳ, ಭತ್ತ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
375 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶ:ಸತತ ಒಂದು ತಿಂಗಳು ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 375 ಹೆಕ್ಟೇರ್ ತೋಟಗಾರಿಕಾ ಬೆಳೆ ನೆಲ ಕಚ್ಚಿದೆ. ಸುಮಾರು 1 ಕೋಟಿ 11 ಲಕ್ಷ ರೂ. ಮೌಲ್ಯದ ತರಕಾರಿ ಬೆಳೆ, ಬಾಳೆ, ಶುಂಠಿ ಕೊಳೆತು ಹೋಗಿದೆ.