ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿದರು. ಬೆಂಗಳೂರು:''ಡಾ. ಕೆ. ಸುಧಾಕರ್ ಅವರು ಭೇಟಿ ಮಾಡಲು ಬರುವ ವೇಳೆ, ಒಬ್ಬರೇ ಬಂದು ಭೇಟಿ ಮಾಡಬೇಕು. ಮಾಧ್ಯಮಗಳನ್ನು ಕರೆತಂದು ಸಿಂಪಥಿ ಕ್ರಿಯೇಟ್ ಮಾಡುವ ಕೆಲಸ ಮಾಡಬಾರದು'' ಎಂದು ಶಾಸಕ ಎಸ್. ಆರ್. ವಿಶ್ವನಾಥ್ ಅವರು ಕೆ.ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.
ಯಲಹಂಕದ ಸಿಂಗನಾಯಕನಹಳ್ಳಿಯ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ ಸುಧಾಕರ್ ಭೇಟಿ ನೀಡಿ ವಾಪಸ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ''ಟಿಕೆಟ್ ಸಿಗದಿದ್ದಾಗ ಕೆಲ ದಿನಗಳ ಕಾಲ ಅಸಮಾಧಾನ ಇರುತ್ತೆ ಅದು ಸಹಜ. ಸೀಟ್ ಸಿಗದಿದ್ರೆ ಮನೆಯಲ್ಲಿ ಇರ್ತಿದ್ದೆ ಅಂತ ಸುಧಾಕರ್ ಹೊಸಕೋಟೆಯಲ್ಲಿ ಹೇಳಿದ್ದಾರೆ. ನಾನು ಆ ರೀತಿ ಎಲ್ಲೂ ಹೇಳಿಲ್ಲ. ನಮಗೆ ಪಕ್ಷ ಬಿಟ್ರೆ ಸ್ವಾರ್ಥ ಸಂಬಂಧ ಏನೂ ಇಲ್ಲ'' ಎಂದರು.
''ನಾಲ್ಕೈದು ದಿನಗಳಿಂದ ಭೇಟಿ ಮಾಡಬೇಕು ಅಂತ ಮೆಸೇಜ್ ಮಾಡಿದ್ರು ಅಷ್ಟೇ, ಮೆಸೇಜ್ ಹೊರತುಪಡಿಸಿ ಯಾವುದೇ ಕರೆ ಮಾಡಿಲ್ಲ. ಸುಧಾಕರ್ಗೆ ನಾನು ಒಬ್ಬನೇ ಭೇಟಿ ಮಾಡಲ್ಲ, ಮುಖಂಡರ ಜೊತೆ ಭೇಟಿ ಮಾಡ್ತೀನಿ ಅಂತ ಖಾಸಗಿ ಮಾಧ್ಯಮದವರಿಗೆ ಹೇಳಿದ್ದೆ. ಸುಧಾಕರ್ ಬರುವ ಮಾಹಿತಿ ನನಗೆ ಇರಲಿಲ್ಲ. ಹೀಗಾಗಿ ನನ್ನ ಕೆಲಸಗಳಿಗೆ ನಾನು ಹೋದೆ. ಭೇಟಿ ಮಾಡಲು ಬರುವವರು ಒಬ್ಬರೇ ಬಂದು ಭೇಟಿ ಮಾಡಬೇಕು. ಮಾಧ್ಯಮದವರನ್ನು ಕರೆತಂದು ಸಿಂಪಥಿ ಗಿಟ್ಟಿಸಿಕೊಳ್ಳುವ ಕೆಲಸ ಮಾಡಬಾರದು'' ಎಂದರು.
''ನಮ್ಮ ಕ್ಷೇತ್ರದಲ್ಲಿ ನಾಳೆಯೇ ಮತದಾನ ನಡೆದ್ರೂ ಮತ ಹಾಕಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಯಲಹಂಕದವರನ್ನು ಖಳನಾಯಕರನ್ನಾಗಿಸುವ ರೀತಿ ಮಾಧ್ಯಮಗಳಲ್ಲಿ ಬಿಂಬಿಸಿದ್ದಾರೆ. ಗೇಟ್ ಹಾಕಿದ್ರು ಒಳಗಡೆ ಬಿಟ್ಟಿಲ್ಲ ಅಂತ ಅಪಪ್ರಚಾರ ಮಾಡಲಾಗಿದೆ. ನಮ್ಮ ಮನೆಗೆ ಪಕ್ಷದ ಕಾರ್ಯಕರ್ತ ಸೇರಿದಂತೆ ಯಾರೇ ಬಂದ್ರೂ ನೀರು ಕೊಟ್ಟು ಉಪಚಾರ ಮಾಡ್ತೀವಿ. ಮಾಜಿ ಸಚಿವರನ್ನು ಬೀದಿಯಲ್ಲಿ ನಿಲ್ಲಿಸುವ ವ್ಯಕ್ತಿ ನಾನಲ್ಲ'' ಎಂದು ತಿಳಿಸಿದರು.
''ನಮ್ಮ ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲರಿಗೂ ನನ್ನ ಬಗ್ಗೆ ಗೌರವವಿದೆ. ಪಕ್ಷದ ಪರ ಕೆಲಸ ಮಾಡ್ತಾರೆ ಅಂತ ನಾನು ಸ್ವಷ್ಟೀಕರಣ ನೀಡುವ ಕೆಲಸ ಮಾಡ್ತಿದ್ದೀನಿ. ಅಲೋಕ್ ಅವರಿಗೆ ಸೀಟ್ ಸಿಕ್ಕಿಲ್ಲ ಬೇಜಾರಾಗಿದ್ದಾರೆ ಅಂತ ಹೇಳುವುದನ್ನು ಬಿಡಬೇಕು. ಮತ್ತೆ ಮತ್ತೆ ಕೆದಕುವ ಕೆಲಸ ಮಾಡಬಾರದು. ಮಾಧ್ಯಮದವರು ಹೇಳಿದ್ರು ಅಯ್ಯೋಪಾಪ ಟಿಕೆಟ್ ಸಿಕ್ಕಿಲ್ಲ ಅಂತ ಮಾತನಾಡುವುದನ್ನು ನಿಲ್ಲಿಸಬೇಕು. ಯಲಹಂಕದಲ್ಲಿ ನಮ್ಮ ಒಗ್ಗಟ್ಟು ಒಡೆಯಲು ಸಾಧ್ಯವಾಗಲ್ಲ. ಕ್ಷೇತ್ರದ ಜನ ನಮ್ಮ ಜೊತೆಗೆ, ಪಕ್ಷದೊಂದಿಗೆ ಇದ್ದಾರೆ'' ಎಂದರು.
''ನಾವು ಸುಧಾಕರ್ ಹೆಸರು ಹೇಳಿ ವೋಟ್ ಕೇಳಲ್ಲ, ಯಾಕಂದ್ರೆ ಅದು ಮೈನಸ್ ಆಗಬಹುದು. ಅದಕ್ಕೆ ನರೇಂದ್ರ ಮೋದಿ ಹೆಸರು ಹೇಳಿ ಕೇಳ್ತೀವಿ. ನಮಗೆ ಪ್ಲಸ್ ಆಗುತ್ತೆ. ಸಿಂಪಥಿ ಗಳಿಸುವ ಕೆಲಸ ಮಾಡಬಾರದು. ನಾವು ಯಾರಿಗೂ ಬಕೆಟ್ ಹಿಡಿಯುವ ಕೆಲಸ ಮಾಡಲ್ಲ. ಯಡಿಯೂರಪ್ಪ ಅವರು ಗೌರವ ಕೊಡಬೇಕು ಅಂತ ಹೇಳಿದ್ದಾರೆ, ಅದನ್ನು ನಾವು ಮಾಡುತ್ತೇವೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ:ಲೇಟ್ನೈಟ್ ಪಾರ್ಟಿ ಪ್ರಕರಣ: ನಟ ದರ್ಶನ್ ಸೇರಿ ಎಂಟು ಜನರಿಗೆ ಬಿಗ್ ರಿಲೀಫ್ - Late Night Party Case