ಬಳ್ಳಾರಿ:ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣಗಳು ಮುಂದುವರೆದಿವೆ. ಬಳ್ಳಾರಿ ನಗರದ ವೈದ್ಯಕೀಯ ಕಾಲೇಜು ಮತ್ತು ವಿಜ್ಞಾನ ಕೇಂದ್ರ (ಬಿಮ್ಸ್) ದಲ್ಲಿ ಮಂಗಳವಾರ ಸಂಜೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ.
ರೇಷ್ಮಾಬಿ ಗೌಸ್‌ಫೀರ್ (25) ಎಂಬುವರಿಗೆ ಜನವರಿ 4ರಂದು ಸಿಜೇರಿಯನ್ ಹೆರಿಗೆ ಮಾಡಲಾಗಿತ್ತು. ನಾಲ್ಕು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದರು. ಬಳಿಕ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಜ.14ರಂದು ಮತ್ತೆ ವಿಮ್ಸ್‌ಗೆ ದಾಖಲಿಸಿ ಕೃತಕ ಉಸಿರಾಟದಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತಾದರೂ, ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ, ''ರೇಷ್ಮಾ ಅವರಿಗೆ ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಸಿಸೇರಿಯನ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾವೂ ಎಲ್ಲ ರೀತಿಯ ಚಿಕಿತ್ಸೆಗಳನ್ನು ನೀಡಿದ್ದೆವು'' ಎಂದು ಹೇಳಿದ್ದಾರೆ.