ಉಡುಪಿ:ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮನ್ ದೇಶದ ಮೀನುಗಾರಿಕಾ ಬೋಟ್ ಪತ್ತೆಯಾಗಿದೆ. ತಮಿಳುನಾಡಿನ ಮೂವರು ಮೀನುಗಾರರು ಓಮನ್ ಹಾರ್ಬರ್‌ನಿಂದ ತಪ್ಪಿಸಿಕೊಂಡು ಈ ಬೋಟ್‌ನಲ್ಲಿ ಭಾರತೀಯ ಸಮುದ್ರಕ್ಕೆ ಬಂದಿದ್ದರು ಎಂಬ ಮಾಹಿತಿ ದೊರೆತಿದೆ.
"ಜೇಮ್ಸ್ ಫ್ರಾಂಕ್ಲಿನ್ (50), ರಾಬಿನ್ ಸ್ಟನ್ (50) ಮತ್ತು ಡಿರೋಸ್ ಅಲ್ಪೋನ್ಸ್ (38) ಎಂಬವರು ಓಮನ್ ಮೂಲದ ಬೋಟ್‌ನಲ್ಲಿ ಮೀನುಗಾರಿಕಾ ವೃತ್ತಿ ನಡೆಸುತ್ತಿದ್ದರು. ಆದರೆ, ಬೋಟ್ ಮಾಲೀಕರು ಇವರ ಪಾಸ್‌ಪೋರ್ಟ್ ವಶಕ್ಕೆ ಪಡೆದುಕೊಂಡು ವೇತನ ಹಾಗೂ ಆಹಾರ ನೀಡದೇ ಸತಾಯಿಸುತ್ತಿದ್ದರು. ಮಾಲೀಕ ಚಿತ್ರಹಿಂಸೆ ನೀಡುತ್ತಿದ್ದ ಕಾರಣ ಪ್ರಾಣಭಯದಿಂದ ಓಮನ್ ಹಾರ್ಬಾರ್‌ನಿಂದ ತಪ್ಪಿಸಿಕೊಂಡು ಬಂದಿದ್ದಾರೆ" ಎಂದು ಕರಾವಳಿ ಕಾವಲು ಪಡೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಓಮನ್ ಹಾರ್ಬರ್‌ನಿಂದ ತಪ್ಪಿಸಿಕೊಂಡು ಬಂದ ತಮಿಳುನಾಡಿನ ಮೀನುಗಾರರು ಸಮುದ್ರ ಮಾರ್ಗದಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಭಾರತದ ಸಮುದ್ರ ತೀರಕ್ಕೆ ಬಂದಿದ್ದರು. ಕಾರವಾರ ದಾಟಿ ಮಲ್ಪೆಯತ್ತ ಬರುವಾಗ ಡೀಸೆಲ್ ಖಾಲಿಯಾಗಿ, ಹಣ ಮತ್ತು ಆಹಾರವಿಲ್ಲದೇ ಪರದಾಟ ನಡೆಸುತ್ತಿದ್ದರು. ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸ್ಥಳೀಯ ಮೀನುಗಾರರು ಇವರನ್ನು ಗಮನಿಸಿ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು. ಮೀನುಗಾರರಿಂದ ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ಪೊಲೀಸರು, ಬೋಟ್ ಹಾಗೂ ಮೀನುಗಾರರನ್ನು ವಶಕ್ಕೆ ಪಡೆದುಕೊಂಡು ಪಾಸ್‌ಪೋರ್ಟ್ ಇಲ್ಲದೇ ವಿದೇಶಿ ಹಡಗಿನಲ್ಲಿ ಗಡಿ ದಾಟಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ 32 ತಮಿಳು ಮೀನುಗಾರರ ಬಂಧನ, 5 ದುಬಾರಿ ಬೋಟ್ ವಶಕ್ಕೆ - SRI LANKA ARRESTS FISHERMEN