ಕರ್ನಾಟಕ

karnataka

ETV Bharat / state

ಹಳೆ ಪಿಂಚಣಿ ಯೋಜನೆಯನ್ನು ಕೂಡಲೇ ಮರುಸ್ಥಾಪಿಸಬೇಕು: ಸಿ.ಎಸ್.ಷಡಾಕ್ಷರಿ - ಸಿ ಎಸ್ ಷಡಾಕ್ಷರಿ

ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಕೂಡಲೇ ಮರುಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಒತ್ತಾಯಿಸಿದ್ದಾರೆ.

ಸಿ. ಎಸ್ ಷಡಾಕ್ಷರಿ
ಸಿ. ಎಸ್ ಷಡಾಕ್ಷರಿ

By ETV Bharat Karnataka Team

Published : Feb 15, 2024, 9:09 PM IST

ಬೆಂಗಳೂರು:ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು. ಮೊದಲ ಹಂತವಾಗಿ ಎನ್.ಪಿ.ಎಸ್ ನೌಕರರ ವೇತನದಲ್ಲಿ ಕಡಿತ ಮಾಡಿಕೊಳ್ಳುತ್ತಿರುವ ವಂತಿಗೆಯನ್ನು ನಿಲ್ಲಿಸಲು ಕೂಡಲೇ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಆಗ್ರಹಿಸಿದರು.

ಗುರುವಾರ ಕಬ್ಬನ್ ಉದ್ಯಾನವನದಲ್ಲಿ ಇರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾಸಮ್ಮೇಳನದ ಪೂರ್ವಭಾವಿಯಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನೂತನ ಪಿಂಚಣಿ ಯೋಜನೆ ರದ್ದು ಮಾಡಬೇಕು ಎಂಬುದು ನಮ್ಮ ಬೇಡಿಕೆ. ರಾಜ್ಯ ಸರ್ಕಾರ ಈಗಾಗಲೇ ಬದಲಾವಣೆಯನ್ನು ತಂದಿರುವ ರಾಜ್ಯಗಳಿಗೆ ಹೋಗಿ ಅಧ್ಯಯನ ಮಾಡುತ್ತೇವೆ ಎಂದಿತ್ತು. ಆದರೆ ಇದುವರೆಗೂ ಇದರ ಬಗ್ಗೆ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ವೇಳೆ ಪ್ರಮುಖ ಮೂರು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಿದ್ದೇವೆ. ಹಳೆಯ ಪಿಂಚಣಿ ಯೋಜನೆ ಮರುಜಾರಿ, 7ನೇ ವೇತನ ಆಯೋಗದ ವರದಿಯ ಅನುಷ್ಠಾನ, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಪ್ರಮುಖ ಹಕ್ಕೊತ್ತಾಯಗಳಾಗಿವೆ ಎಂದರು.

ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ

7ನೇ ವೇತನ ಆಯೋಗದಿಂದ ವರದಿ ಪಡೆದು, ಆಯೋಗದ ಶಿಫಾರಸುಗಳನ್ನು ಶೀಘ್ರವಾಗಿ ಜಾರಿಗೊಳಿಸಬೇಕು. ಸಮಿತಿಯ ವರದಿ ಬಜೆಟ್​ನಲ್ಲಿ ಹೊರಬರಬೇಕೆನ್ನುವುದು ಇಲ್ಲ. ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿ ಜಾರಿಗೆ ತರಬಹುದು. ಮಾರ್ಚ್ ವೇಳೆಗೆ ಈ ವರದಿಯ ಅನುಷ್ಠಾನ ಆಗಬೇಕು ಎನ್ನುವುದು ನಮ್ಮ ಒತ್ತಾಯ. ಲೋಕಸಭೆ ಚುನಾವಣೆಯೂ ಇರುವುದರಿಂದ ಶೀಘ್ರದಲ್ಲೇ ಜಾರಿಗೆ ಬರಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಆರೋಗ್ಯ ಚಿಕಿತ್ಸೆ ನೀಡುವ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'ಯನ್ನು (ಕೆ.ಎ.ಎಸ್.ಎಸ್) ಶೀಘ್ರ ಅನುಷ್ಠಾನಗೊಳಿಸಬೇಕಿದೆ. ಸಂಜೀವಿನಿ ಯೋಜನೆ ಅಂತಿಮ ಘಟ್ಟಕ್ಕೆ ಬಂದಿದೆ. ಶೀಘ್ರದಲ್ಲೇ ಜಾರಿಗೆ ತಂದರೆ ಈ ಯೋಜನೆಯಿಂದ ಸಹಾಯ ಆಗಲಿದೆ ಎಂದು ತಿಳಿಸಿದರು.

ಸಿ ಎಸ್ ಷಡಾಕ್ಷರಿ

ಫೆಬ್ರುವರಿ 27ರಂದು ನಡೆಯಲಿರುವ 'ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ' ಮತ್ತು ಕಾರ್ಯಾಗಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಚಿವರುಗಳು, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ 'ಆಡಳಿತದಲ್ಲಿ ಕಾರ್ಯಕ್ಷಮತೆ' ಹಾಗೂ ನೌಕರರ ಆರೋಗ್ಯ ಸುಧಾರಣೆಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ 'ನೌಕರರ ಸೇವೆ ಹಾಗೂ ಕಾರ್ಯದಕ್ಷತೆ' ಕುರಿತು ಉಪನ್ಯಾಸ ನೀಡಲಿದ್ದಾರೆ.

'ನೌಕರರ ಸೇನೆ' ಸಾಕ್ಷ್ಯಚಿತ್ರ ಬಿಡುಗಡೆ: ಖ್ಯಾತ ಹೃದ್ರೋಗ ತಜ್ಞ ಜಯದೇವ ಹೃದ್ರೋಗ ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ 'ನೌಕರರ ಆರೋಗ್ಯ ಹಾಗೂ ಒತ್ತಡ ನಿರ್ವಹಣೆ' ಕುರಿತು ಮಾತನಾಡಲಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಆಡಳಿತದಲ್ಲಿ ರಾಜ್ಯ ಸರ್ಕಾರಿ ನೌಕರರ ಪಾತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘ ನಡೆದು ಬಂದ ದಾರಿ ಹಾಗೂ ಸಂಘದ ಸಾಧನೆಗಳ ಕುರಿತ 'ನೌಕರರ ಸೇನೆ' ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

3.00 ಲಕ್ಷ ಸರ್ಕಾರಿ ನೌಕರರ ಸಮ್ಮೇಳನ: ಕಳೆದ 7 ವರ್ಷಗಳಿಂದ ಯಾವುದೇ ಸಮ್ಮೇಳನವನ್ನು ಸಂಘದಿಂದ ಆಯೋಜಿಸಿಲ್ಲ. ಆದ್ದರಿಂದ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಯೋಜನಾ ಶಾಖೆಗಳ ಪದಾಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ನೌಕರರು ಭಾಗವಹಿಸಲಿದ್ದಾರೆ. ಇದು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 3 ಲಕ್ಷ ಸರ್ಕಾರಿ ನೌಕರರ ಸಮ್ಮೇಳನವಾಗಿದೆ. ಹೀಗಾಗಿ ಪ್ರತಿ ಜಿಲ್ಲೆ, ತಾಲೂಕುಗಳಿಂದ ಭಾಗವಹಿಸುವ ಸರ್ಕಾರಿ ನೌಕರರಿಗೆ ಆಯಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ವಿಶೇಷ ಸಾಂದರ್ಭಿಕ ರಜೆ ನೀಡಲಾಗಿದೆ ಎಂದು ಷಡಾಕ್ಷರಿ ತಿಳಿಸಿದರು.

ಇದನ್ನೂ ಓದಿ:ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಎತ್ತಂಗಡಿ, ಕೋಲಾರಕ್ಕೆ ವರ್ಗ

ABOUT THE AUTHOR

...view details