ಬೆಂಗಳೂರು: ರಾಜ್ಯ ಸರಕಾರದಿಂದ 2006 ಏಪ್ರಿಲ್ನಲ್ಲಿ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರನ್ನು ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ರಾಜ್ಯ ಸರಕಾರ ಇಂದು ಆದೇಶ ಹೊರಡಿಸಿದೆ.
ರಾಜ್ಯ ಸರಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ರಾಜ್ಯ ಸರಕಾರಿ ನೌಕರರು ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ಗಮನ ಸೆಳೆದಿದ್ದರು. ಇದರ ಭಾಗವಾಗಿ 2006ರ ನೇಮಕಾತಿ ಅಧಿಸೂಚನೆಯಂತೆ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಅನ್ವಯವಾಗುವಂತೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿ (ಆಡಳಿತ ಮತ್ತು ಸಮನ್ವಯ) ಅರುಳ್ ಕುಮಾರ್ ಅವರು ಆದೇಶ ಜಾರಿಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದ ಆದೇಶದ ಬಗ್ಗೆ ಟ್ವೀಟ್ ಮಾಡಿ ಇದರಿಂದ ಸುಮಾರು 13 ಸಾವಿರ ಸರಕಾರಿ ನೌಕರರಿಗೆ ಅನುಕೂಲವಾಗಲಿದೆ. ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ವೇಳೆ ನೀಡಿದ ಆಶ್ವಾಸನೆಯಂತೆ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರಕಾರದ ಆದೇಶ ಬಗ್ಗೆ ಈ ಟಿವಿ ಭಾರತ ಜೊತೆ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರು, ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಸರಕಾರಿ ನೌಕರರನ್ನು ಒಳಪಡಿಸಿ ಆದೇಶ ಹೊರಡಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಆದೇಶದಿಂದ 11366 ಸರಕಾರಿ ನೌಕರರಿಗೆ ಮಾತ್ರ ಅನುಕೂಲ ದೊರೆಯಲಿದೆ. ಉಳಿದ 2.50 ಲಕ್ಷ ಸರಕಾರಿ ನೌಕರರನ್ನೂ ಹಳೆ ಪಿಂಚಣಿಯೋಜನೆ ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸುವುದಾಗಿ ಹೇಳಿದ್ದಾರೆ
ಇದನ್ನೂ ಓದಿ:ವ್ಯಾಸಂಗ ಮಾಡಿದ ಬೋರ್ಡ್ ಬಗ್ಗೆ ಸಿಇಟಿ ಅರ್ಜಿಯಲ್ಲಿ ತಪ್ಪಾಗಿ ಮಾಹಿತಿ ನೀಡಿದ್ದೀರಾ?: ಹಾಗಿದ್ದರೆ ಈ ಸುದ್ದಿ ಓದಿ