ಕಳಸದ ಕೋಣೆಕೊಡು ಗ್ರಾಮಕ್ಕೆ ಅಧಿಕಾರಿಗಳ ಭೇಟಿ (ETV Bharat) ಚಿಕ್ಕಮಗಳೂರು:ಬಿಸಿಲೇ ಇರಲಿ, ಮಳೆಯೇ ಇರಲಿ, ಸರ್ವ ಋತುವಿನಲ್ಲೂ ಈ ಊರ ಜನರ ಗ್ರಹಚಾರ ಯಾವಾಗ ಕೆಡುತ್ತದೆ ಎಂಬುದು ಅವರಿಗೇ ಗೊತ್ತಿರಲ್ಲ. ಊರಿನಲ್ಲಿ ಮಗು ಹುಟ್ಟಿದರೂ, ಕಾಯಿಲೆ ಬಂದು ಸತ್ತು ಹೋದರೂ ಇವರ ಬಾಳಿಗೆ ಜೋಳಿಗೆಯೇ ಗತಿ. ಈ ದಯನೀಯ ಪರಿಸ್ಥಿತಿ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಇದೀಗ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಆಶಾಭಾವನೆ ಮೂಡಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಜೋಳಿಗೆಯಲ್ಲಿ ಶವ ಹೊತ್ತು ಸಾಗಾಟ ಮಾಡಿರುವ ಕರುಣಾಜನಕ ಸುದ್ದಿಯನ್ನು 'ಈಟಿವಿ ಭಾರತ' ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಜಿ.ಪಂ, ತಾ.ಪಂ ಹಾಗೂ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕರು ಕಳಸ ತಾಲೂಕಿನ ಕೋಣೆಕೊಡು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಆದರೆ ಇಲ್ಲಿಗೆ ಬೇಕಾಗುವ ಸೇತುವೆ, ರಸ್ತೆ ನಿರ್ಮಾಣಕ್ಕೆ ಇನ್ನಷ್ಟು ಹಣದ ಅವಶ್ಯಕತೆ ಇದೆ. ಉನ್ನತಾಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ಮಾತನಾಡಿ ತುರ್ತು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಇದು ಗ್ರಾಮಸ್ಥರಲ್ಲಿ ಸಂತಸ ಉಂಟುಮಾಡಿದೆ.
ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಳೆರಾಯ ಆರ್ಭಟಿಸಿದ್ದಾನೆ. ಹೀಗಾಗಿ, ತುಂಬಿ ಹರಿಯುತ್ತಿರುವ ಹಳ್ಳದ ಕಾಲು ಸಂಕದ ಮೇಲೆ ನಡೆಯಲು ಅಧಿಕಾರಿಗಳು ತಡವರಿಸಿದ ಘಟನೆ ನಡೆಯಿತು. ಈ ವೇಳೆ ಗ್ರಾಮಸ್ಥರು ನಮ್ಮೂರಿಗೆ ಯಾವಾಗ ರಸ್ತೆ, ಸೇತುವೆ ನಿರ್ಮಿಸಿ ಕೊಡುತ್ತೀರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಚಿಕ್ಕಮಗಳೂರು: ರಸ್ತೆ ಸೇರಿ ಮೂಲಸೌಲಭ್ಯ ಮರೀಚಿಕೆ; ಬಡಿಗೆಗೆ ಮೃತದೇಹ ಕಟ್ಟಿ ಸಾಗಿಸಿದ ಗ್ರಾಮಸ್ಥರು - NO ROAD FACILITIES