ಕರ್ನಾಟಕ

karnataka

ETV Bharat / state

ಅಧಿಕಾರಿಗಳು ಜಾತ್ಯತೀತತೆ, ಸಂವಿಧಾನಕ್ಕೆ ಬದ್ಧರಾಗಿರಬೇಕು: ಸಿಎಂ ಸಿದ್ದರಾಮಯ್ಯ - ಜಾತ್ಯತೀತತೆ

ಜಾತ್ಯತೀತತೆ, ಸಂವಿಧಾನಕ್ಕೆ ಅಧಿಕಾರಿಗಳು ಪೂರ್ತಿ ಬದ್ಧರಾಗಿರದಿದ್ದಲ್ಲಿ ಅಂಥವರಿಗೆ ಇಲ್ಲಿ ಮುಂದುವರೆಯಲು ಅವಕಾಶ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ

By ETV Bharat Karnataka Team

Published : Jan 31, 2024, 3:22 PM IST

ಬೆಂಗಳೂರು : ನಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಜಾತ್ಯತೀತತೆಗೆ ಮತ್ತು ಸಂವಿಧಾನಕ್ಕೆ ಪೂರ್ತಿ ಬದ್ಧರಾಗಿರಬೇಕು: ಇಲ್ಲದಿದ್ದರೆ ಅಂಥವರಿಗೆ ಇಲ್ಲಿ ಮುಂದುವರೆಯಲು ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮೊಟ್ಟ ಮೊದಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯ ಆರಂಭದಲ್ಲಿ ಮಾತನಾಡಿದ ಸಿಎಂ, ನಿಮ್ಮ ಅನುಭವಗಳು ಜಿಲ್ಲಾಡಳಿತಕ್ಕೆ ನೆರವಾಗಬೇಕು. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು, ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷಿಪ್ರ ತೀರ್ಮಾನ ತೆಗೆದುಕೊಳ್ಳಲು ನೆರವಾಗಬೇಕು ಎನ್ನುವ ಕಾರಣಕ್ಕೆ ನಿಮ್ಮನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ

ಮುಖ್ಯಮಂತ್ರಿಗಳು ನೀಡಿದ ಇತರೆ ಸೂಚನೆಗಳ ಹೈಲೈಟ್ಸ್ : ಸರ್ಕಾರ ಬಂದು 8 ತಿಂಗಳಾಗಿದೆ. ಡಿಸಿ, ಸಿಇಒ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿ 3-4 ತಿಂಗಳಾಗಿದೆ.‌ ನೀವು ಉಸ್ತುವಾರಿ ವಹಿಸಿದ ಮೇಲೆ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ ಎನ್ನುವ ಮಾಹಿತಿಗಳನ್ನು ಸಭೆಗೆ ನೀಡಬೇಕು ಎನ್ನುವ ಸೂಚನೆ ನೀಡುತ್ತಾ, ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿಸುವಲ್ಲಿ ನಿಮ್ಮ ಅನುಭವ ಎಷ್ಟು ನೆರವಾಗಿದೆ ಎಂದು ಕೇಳಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಕೆಲವು ಕಡೆ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕೆಲವೇ ಕೆಲವು ಫಲಾನುಭವಿಗಳಿಗೆ ತಲುಪಲು ಆಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಇನ್ನೂ ಏಕೆ ಆಗಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿ ಅವರು, ಕೆಲವರಿಗೆ ಮಾತ್ರ ಗ್ಯಾರಂಟಿ ಅನುಕೂಲ ತಲುಪಿಲ್ಲ. ಈ ಕೆಲವರೇ ಹೆಚ್ಚು ಹೇಳಿಕೊಂಡು ತಿರುಗುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಅನುಕೂಲ ಪಡೆಯುತ್ತಿರುವವರು ಮೌನವಾಗಿದ್ದಾರೆ. ಆದ್ದರಿಂದ ತಾಂತ್ರಿಕ ಸಮಸ್ಯೆ ಮೊದಲು ಬಗೆಹರಿಸಿ, ಅನರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಿ ಅವರ ಅರ್ಜಿ ತಿರಸ್ಕರಿಸಿ ಎನ್ನುವ ಸೂಚನೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ

ಸಾರ್ವಜನಿಕರು ರೆವಿನ್ಯೂ ಇಲಾಖೆ, ತಹಶೀಲ್ದಾರ್ ಮತ್ತು ಎಸಿ ಹಾಗೂ ಡಿಸಿ ಕಚೇರಿಗಳಿಗೆ ಅಲೆದಾಟ ಕಡಿಮೆ ಆಗಿದೆಯಾ? ತಹಶೀಲ್ದಾರ್, ಎಸಿ, ಡಿಸಿ ಕಚೇರಿಗಳಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗ್ತಾ ಇದೆಯಾ? ಜನರ ಅರ್ಜಿಗಳು ಎಷ್ಟು ದಿನಗಳಿಂದ ಬಾಕಿ ಇವೆ, ಪರಿಶೀಲನೆ ನಡೆಸಿದ್ದೀರಾ? ಎಷ್ಟು ಬಾಕಿ ಅರ್ಜಿ ನಿಮ್ಮಿಂದ ಬಗೆಹರಿದಿದೆ? ಎಷ್ಟು ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೀರಿ?. ಡಯಾಲಿಸಿಸ್ ಕೇಂದ್ರಗಳಲ್ಲಿ ಸಮರ್ಪಕ ಸೇವೆ ಜನರಿಗೆ ಸಿಗುತ್ತಿದೆಯಾ? ಎಂದು ಪ್ರಶ್ನಿಸಿದ್ದಾರೆ.

ಜನತಾ ಸ್ಪಂದನದಲ್ಲಿ ಬಂದ ಸಮಸ್ಯೆಗಳಿಗೆ ಸಮರೋಪಾದಿಯಲ್ಲಿ ಪರಿಹಾರ ಒದಗಿಸಿಕೊಡಿ ಎನ್ನುವ ಸೂಚನೆ ನೀಡಿದ್ದೆ. ಸದ್ಯ ಸಮಾಧಾನಕರವಾಗಿ ಕೆಲಸ ಮಾಡಿದ್ದೀರಿ. ಇದರ ಪ್ರಮಾಣ ಮತ್ತು ವೇಗವನ್ನು ಇನ್ನಷ್ಟು ಹೆಚ್ಚಿಸಿ ಎನ್ನುವ ಸೂಚನೆ ನೀಡಿದ ಸಿಎಂ, ಎಷ್ಟು ಕಚೇರಿಗಳಿಗೆ, ಹಾಸ್ಟೆಲ್​ಗಳಿಗೆ, ಠಾಣೆಗಳಿಗೆ, ಶಾಲೆಗಳಿಗೆ, ಭೇಟಿ ನೀಡಿದ್ದೀರಿ ಎನ್ನುವ ವಿವರಗಳನ್ನು ಪಡೆದುಕೊಂಡರು. ಕೋಲಾರದ ಹಾಸ್ಟೆಲ್​ನಲ್ಲಿ ಊಟದಲ್ಲಿ ಆದ ಸಮಸ್ಯೆಗೆ ಯಾರು ಹೊಣೆ? ಸಮಸ್ಯೆ ಯಾಕಾಯ್ತು? ಮೊದಲೇ ಅಧಿಕಾರಿಗಳು ಈ ಬಗ್ಗೆ ನಿಗಾ ಇಡಬೇಕಿತ್ತು. ನಿಗಾ ವಹಿಸದ ಕಾರಣಕ್ಕೆ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಇವು ಮರುಕಳಿಸಿದರೆ ಸೂಕ್ತ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ

ನೀವು ಉಸ್ತುವಾರಿ ವಹಿಸಿರುವ ಜಿಲ್ಲೆಯಲ್ಲಿನ‌ ಅಧಿಕಾರಿಗಳು-ಫಲಾನುಭವಿಗಳ ಜತೆ ಸಂಪರ್ಕ, ಸಂಬಂಧ ಇನ್ನಷ್ಟು ಹೆಚ್ಚು ಹೆಚ್ಚು ಏರ್ಪಡಬೇಕು. ಜನ ಹೆಚ್ಚು ಕೃಷಿ, ಕಂದಾಯ, ಪೊಲೀಸ್ ಇಲಾಖೆ, ಠಾಣೆಗಳಿಗೆ ಬರ್ತಾರೆ. ನೀವು ಎಷ್ಟು ಠಾಣೆಗಳಿಗೆ ಭೇಟಿ ನೀಡಿದ್ರಿ? ನೀವು ಉಸ್ತುವಾರಿ ವಹಿಸಿದ ಮೇಲೆ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ? ನಿಮ್ಮಿಂದ ಜಿಲ್ಲಾಡಳಿತಕ್ಕೆ ಏನು ಸಲಹೆ ಸಿಕ್ಕಿದೆ? ನಿಮ್ಮ ಅನುಭವದ ಅನುಕೂಲ ಜಿಲ್ಲೆಗಳಿಗೆ ಎಷ್ಟಾಗಿದೆ? ಎಂದು ಪ್ರಶ್ನಿಸಿದ್ದಾರೆ.

ಡಿಸಿಗಳಿಗೆ ಜಾತ್ಯತೀತತೆ ಬಗ್ಗೆ ಕಮಿಟ್​ಮೆಂಟ್ ಇರಬೇಕು. ಸಂವಿಧಾನದ ಬಗ್ಗೆ ಗೌರವ ಇರಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅಂತಹ ಅಧಿಕಾರಿಗಳಿಗೆ ಇಲ್ಲಿ ಮುಂದುವರೆಯುವ ಹಕ್ಕಿಲ್ಲ. ಅವಕಾಶವೂ ಇಲ್ಲ. ನಿಮ್ಮ ಲೆವೆಲ್​ನಲ್ಲಿ ಸಮಸ್ಯೆ ಬಗೆಹರಿಯದೆ ಹೋದರೆ, ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು. ಕರ್ತವ್ಯಲೋಪ, ನಿರ್ಲಕ್ಷ್ಯಕ್ಕೆ ಜಿಲ್ಲಾ ಮಟ್ಟದಲ್ಲಿ ನೀವು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದೇ ಹೋದರೆ ಜಿಲ್ಲಾ ಮಟ್ಟದಲ್ಲಿ ಹೇಗೆ ಶಿಸ್ತು ತರ್ತೀರಿ? ಎಂದಿದ್ದಾರೆ.

ಸಮಸ್ಯೆಗಳನ್ನು ಬಗೆಹರಿಸಬೇಕು :ಪ್ರತಿ ಜಿಲ್ಲೆಯ ಪ್ರಗತಿ ಪರಿಶೀಲನೆಯನ್ನು ಸವಿವರವಾಗಿ ಮಾಡಬೇಕು. ಅದರಿಂದ ಜಿಲ್ಲೆಯ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆಯಾ ಜಿಲ್ಲೆಯ ರಸ್ತೆ ಸಾರಿಗೆ ನಿಗಮದ ಡಿಸಿಗಳೊಂದಿಗೆ ಸಭೆ ನಡೆಸಿ, ಬಸ್​ಗಳ ಕೊರತೆ, ಸ್ಥಗಿತಗೊಳಿಸಿರುವ ಮಾರ್ಗಗಳು, ಬಸ್‌ ಸೇವೆಯಲ್ಲಿನ ವ್ಯತ್ಯಯ ಮೊದಲಾದ ವಿಷಯಗಳ ಕುರಿತು ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.

ಸಿಎಂ ಮಾನವ - ವನ್ಯಪ್ರಾಣಿ ಸಂಘರ್ಷದ ಸಮಸ್ಯೆ ಕುರಿತು ಪ್ರಸ್ತಾಪಿಸಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ಜಿಲ್ಲೆಯಲ್ಲಿ ವನ್ಯಪ್ರಾಣಿಗಳು ರೈತರ ಜಮೀನಿಗೆ, ತೋಟಕ್ಕೆ ನುಗ್ಗಲು ಆಹಾರ, ನೀರಿನ ಕೊರತೆಯೇ ಕಾರಣ. ಅರಣ್ಯದೊಳಗೆಯೇ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಮೇವಿನ ಲಭ್ಯತೆಯ ವಾಸ್ತವಾಂಶವನ್ನು ಆಧರಿಸಿ ಲೆಕ್ಕಾಚಾರ ಹಾಕಬೇಕು. ಮೇವು ಸಾಲದೆ ಇದ್ದರೆ, ಬೆಳೆಯಬೇಕು. ರೈತರಿಂದ ಕೊಂಡುಕೊಳ್ಳಬೇಕು. ಮೇವಿಗೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಬೇಕು. 20 ಕೋಟಿ ರೂ. ಮೇವು ಮಿನಿ ಕಿಟ್‌ ವಿತರಣೆ ಕುರಿತು ಸಂಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.

ಮೇವು ಬೆಳೆಯಲು ಕ್ರಮ ಕೈಗೊಳ್ಳಬೇಕು : ಮುಂದೆ ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಸಮಸ್ಯೆ ಎದುರಾಗಬಹುದು. ಇದಕ್ಕೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ರೇಷ್ಮೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಯ ಫಾರಂಗಳಲ್ಲಿ ಮೇವು ಬೆಳೆಯಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು, ಮೇವು, ಜನರು ಗುಳೆ ಹೋಗದಂತೆ ನೋಡಿಕೊಳ್ಳುವುದು ಹಾಗೂ ಇನ್‌ಪುಟ್‌ ಸಬ್ಸಿಡಿ ವಿತರಣೆ – ಈ ನಾಲ್ಕು ಅಂಶಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಡೈರಿ ನಿರ್ವಹಣೆ ಮಾಡಬೇಕು. ತಿಂಗಳಿಗೆ ಕನಿಷ್ಠ ಎರಡು ಬಾರಿಯಾದರೂ ತಮ್ಮ ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಭೇಟಿ ನೀಡುವುದು ಕಡ್ಡಾಯ ಮಾಡಿಕೊಳ್ಳಿ‌ ಎಂದು ಸಿಎಂ ಸೂಚಿಸಿದ್ದಾರೆ.

ಇದನ್ನೂ ಓದಿ :ಶ್ರೀರಾಮಚಂದ್ರ ಎಲ್ಲಾ ಜಾತಿ, ಧರ್ಮವನ್ನು ಸಮಾನವಾಗಿ ಕಾಣುತ್ತಿದ್ದರು: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details