ಬೆಂಗಳೂರು:ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ ಪುಷ್ಕರ್ ಫಾರ್ಮಾ ಲಿಮಿಟೆಡ್ ಕಂಪನಿ ಸರಬರಾಜು ಮಾಡಿರುವ ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ ಔಷಧವನ್ನು (Oxymetazoline Hydrochloride Solution) ವಾಪಸ್ ಪಡೆಯಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಉತ್ಪನ್ನದ ಬಗ್ಗೆ ಸೃಷ್ಟಿಯಾಗಿರುವ ಗೊಂದಲಗಳ ಬಗ್ಗೆ ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಗೋದಾಮುಗಳು ಮತ್ತು ಸಂಸ್ಥೆಗಳಿಂದ ಉತ್ಪನ್ನವನ್ನು ಹಿಂಪಡೆಯಲಾಗುತ್ತಿದೆ. ಔಷಧ ಉತ್ಪನ್ನವನ್ನು ಬದಲಿಸಲು M/S ಪುಷ್ಕರ್ ಫಾರ್ಮಾ ಲಿಮಿಟೆಡ್ಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪುಷ್ಕರ್ ಫಾರ್ಮಾ ಕಂಪನಿ ಸರಬರಾಜು ಮಾಡಿರುವ ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ ಉತ್ಪನ್ನದಲ್ಲಿ ದೋಷವಿದೆಯೇ ಎಂಬುದನ್ನು ಬಗ್ಗೆ ಪರಿಶೀಲಿಸಲು ಸೂಚನೆ ನೀಡಲಾಗಿತ್ತು. ಔಷಧಿ ಪರಿಶೀಲನೆ ವೇಳೆ ಇದು ಪಶುಗಳಿಗೆ ಬಳಸುವ ಔಷಧವಲ್ಲ. ಔಷಧದ ಮೇಲಿನ ಮುದ್ರಣ ದೋಷವಾಗಿದೆ ಎಂದು ತಿಳಿದುಬಂದಿದೆ. ಆದರೂ, ಮುಂಜಾಗೃತಾ ಕ್ರಮವಾಗಿ ದಾಸ್ತಾನಿನಲ್ಲಿರುವ ಔಷಧಿಗಳನ್ನು ವಾಪಸ್ ಕಳುಹಿಸಲು ತಿಳಿಸಲಾಗಿದೆ.
ಲೇಬಲ್ ಬದಲಾಗಿರುವ ಬಗ್ಗೆ ಪುಷ್ಕರ್ ಫಾರ್ಮಾ ಈ ಮೊದಲೇ ಮಾಹಿತಿ ನೀಡಿದ್ದು, ಆರೋಗ್ಯ ಅಧಿಕಾರಿಗಳು ಕೂಡ ಸೂಕ್ತ ಪರಿಶೀಲನೆ ನಡೆಸಿದ್ದಾರೆ. ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ರಾಜ್ಯದ ಜನರ ಆರೋಗ್ಯ ವಿಷಯದಲ್ಲಿ ಯಾವುದೇ ಪ್ರಮಾದ ನಡೆಯಲು ಆರೋಗ್ಯ ಇಲಾಖೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಡೆಂಘೀ ಭೀತಿ; ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾದ ಆರೋಗ್ಯ ಇಲಾಖೆ - Dengue cases in Karnataka