ದಾವಣಗೆರೆ:"ರಾಮ ಮಂದಿರ ನಿರ್ಮಾಣದಿಂದ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬಂದರೆ ತಪ್ಪೇನಿಲ್ಲ" ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನಿರ್ಮಿಸಿದ್ದಾರೆ. ನಾನು ಅಯೋಧ್ಯ ರಾಮಮಂದಿರ ಟ್ರಸ್ಟ್ ಸದಸ್ಯನಾಗಿದ್ದು, ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆದ ಬಳಿಕ ಕಳೆದ 40 ದಿನಗಳ ಕಾಲ ಅಲ್ಲಿಯೇ ಕೆಲ ಪೂಜಾ ವಿಧಿವಿಧಾನಗಳನ್ನು ಮುಗಿಸಿ ರಾಮನ ನಾಡಿನಿಂದ ಇಂದು ಹನುಮನ ನಾಡಿಗೆ ಬಂದಿದ್ದೇನೆ." ಎಂದು ಹೇಳಿದರು.
"ಅಯೋಧ್ಯೆಯಂತೆ ಹನುಮನ ಪುಣ್ಯಕ್ಷೇತ್ರ ಆಂಜನಾದ್ರಿ ಬೆಟ್ಟದ ಅಭಿವೃದ್ಧಿಯೂ ಆಗಬೇಕು. ಅಯೋಧ್ಯೆಯಂತೆ ಇದಕ್ಕೊಂದು ಟ್ರಸ್ಟ್ ಮಾಡಬೇಕು. ಇತ್ತೀಚಿಗೆ ರಾಮಮಂದಿರ ದ್ವಂಸ ಮಾಡುವ ಬಗ್ಗೆ ಅನಾಮಧೇಯ ಪತ್ರಗಳು, ಈ ಮೇಲ್ಗಳು ಪತ್ತೆಯಾಗುತ್ತಿವೆ. ಶ್ರೀ ರಾಮ ಮಂದಿರವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಜಾಪ್ರಭುತ್ವ ಇರುವ ದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಇಂತಹ ಮಂದಿರಗಳ ಬಗ್ಗೆ ಅನಗತ್ಯ ಹೇಳಿಕೆ ಅಥವಾ ಪತ್ರಗಳು ಬರೆಯುವುದು ತಪ್ಪು" ಎಂದು ತಿಳಿಸಿದರು.